ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಟೆಸ್ಟ್ ಕ್ರಿಕೆಟ್ ನಲ್ಲಿ ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಆಡಿದ ಕನಿಷ್ಠ 20 ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದುವ ಮೂಲಕ ಆಸೀಸ್ ಆಟಗಾರ ಸ್ವೀವ್ ಸ್ಮಿತ್ ಹಾಗೂ ಟೀಂ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿಯನ್ನು ಮೀರಿಸಿ ಬಾಬರ್ ಅಜಮ್ ನಂ.1 ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪ್ರಸ್ತುತ ಮೂರು ಸ್ವರೂಪಗಳಲ್ಲಿ 40 ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ಬಾಬರ್, ಏಕದಿನ ಮಾದರಿಯಲ್ಲಿ 59.17 ಸರಾಸರಿಯನ್ನು ಹೊಂದಿದ್ದಾರೆ. ಇನ್ನು 2022 ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವ ಬಾಬರ್ ನಾಲ್ಕು ಶತಕ ಮತ್ತು 7 ಅರ್ಧ ಶತಕಗಳನ್ನೊಳಗೊಂಡಂತೆ 69.10 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
ಬಾಬರ್ ಹೊರತುಪಡಿಸಿದರೆ, ಟೆಸ್ಟ್ ಕ್ರಿಕೆಟ್ ನ ಕನಿಷ್ಠ 20 ಇನ್ನಿಂಗ್ಸ್ಗಳಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತ್ಯುತ್ತಮ ಸರಾಸರಿಯಲ್ಲಿ ಹೆಚ್ಚು ರನ್ ಕಲೆ ಹಾಕಿರುವ ಆಟಗಾರರನ್ನು ನೋಡುವುದಾದರೆ, ಈ ಪಟ್ಟಿಯಲ್ಲಿ ಆಸೀಸ್ ಬ್ಯಾಟರ್ ಸ್ಮಿತ್ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಸ್ಮಿತ್ ಬರೋಬ್ಬರಿ 30 ಇನ್ನಿಂಗ್ಸ್ಗಳಲ್ಲಿ ಆರು ಅರ್ಧಶತಕ ಮತ್ತು ನಾಲ್ಕು ಶತಕಗಳನ್ನು ಒಳಗೊಂಡಂತೆ 55.40 ಸರಾಸರಿಯಲ್ಲಿ ರನ್ ಬಾರಿಸಿದ್ದಾರೆ.
ಸ್ಮಿತ್ ಬಳಿಕ ಇಂಗ್ಲೆಂಡ್ ನ ಮಾಜಿ ನಾಯಕ ಜೋ ರೂಟ್ ಇದ್ದು, ರೂಟ್ 34 ಇನ್ನಿಂಗ್ಸ್ ಗಳಲ್ಲಿ 54.20 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ 16 ಇನ್ನಿಂಗ್ಸ್ ಗಳಲ್ಲಿ 48.40 ಸರಾಸರಿಯಲ್ಲಿ ರನ್ ಕಲೆ ಹಾಕಿದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು 5ನೇ ಸ್ಥಾನದಲ್ಲಿ ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ 27 ಇನ್ನಿಂಗ್ಸ್ ಗಳಲ್ಲಿ 34.65 ಸರಾಸರಿಯಲ್ಲಿ ರನ್ ಬಾರಿಸಿದ್ದಾರೆ. ಈ ಅವಧಿಯಲ್ಲಿ ವಿರಾಟ್ ಬ್ಯಾಟ್ ನಿಂದ ಮೂರು ಅರ್ಧ ಶತಕ ಮತ್ತು ಒಂದು ಶತಕ ಹೊರಬಂದಿದೆ.