ಮನೆ ರಾಜಕೀಯ ಮುಂಬೈಗೆ ಮರಳಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ: ಉದ್ದವ್ ಠಾಕ್ರೆ

ಮುಂಬೈಗೆ ಮರಳಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ: ಉದ್ದವ್ ಠಾಕ್ರೆ

0

ಮುಂಬೈ(Mumbai): ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು,  ಪಕ್ಷದ ಬಂಡಾಯ ಶಾಸಕರನ್ನು ಮುಂಬೈಗೆ ಮರಳುವಂತೆ  ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮಂಗಳವಾರ ಮನವಿ ಮಾಡಿದ್ದಾರೆ.

ಬಂಡಾಯ ಶಾಸಕರನ್ನುದ್ದೇಶಿಸಿ ಸಂದೇಶ ಬಿಡುಗಡೆ ಮಾಡಿರುವ ಉದ್ದವ್ ಠಾಕ್ರೆ, ಎಲ್ಲರೂ ಗುವಾಹಟಿಯಿಂದ ಮುಂಬೈಗೆ ಮರಳಿ ಬನ್ನಿ. ಜತೆಯಾಗಿ ಕುಳಿತುಕೊಂಡು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ದಾರಿಯಿದೆ ಎಂಬ ಬಗ್ಗೆ ನನಗೆ ಖಾತರಿಯಿದೆ. ನಾವಿದನ್ನು ಮಾಡಬಹುದು  ಎಂದು ಹೇಳಿದ್ದಾರೆ.

ಸದ್ಯ, ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಶಾಸಕರು ಅಸ್ಸಾಂನ ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಉಭಯ ಬಣಗಳ ನಡುವೆ ಕಳೆದ ಕೆಲವು ದಿನಗಳಿಂದ ವಾಕ್ಸಮರವೂ ತೀವ್ರಗೊಂಡಿದೆ.

ಇಂದು ಬೆಳಿಗ್ಗೆ ಉದ್ಧವ್ ಅವರನ್ನು ಉದ್ದೇಶಿಸಿ ಸಂದೇಶ ಬಿಡುಗಡೆ ಮಾಡಿದ್ದ ಶಿಂಧೆ, ನಿಮ್ಮ ಸಂಪರ್ಕದಲ್ಲಿರುವ ಒಬ್ಬ ಬಂಡಾಯ ಶಾಸಕನನ್ನು ಹೆಸರಿಸಿ ಎಂದು ಸವಾಲೆಸೆದಿದ್ದರು.

ಅಸ್ಸಾಂನ ಬಿಜೆಪಿ ಶಾಸಕರು, ನಾಯಕರು ಹಾಗೂ ಸಚಿವರು ನಿಯಮಿತವಾಗಿ ಹೋಟೆಲ್‌ಗೆ ಭೇಟಿ ನೀಡಿ, ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪಕ್ಷೇತರ ಶಾಸಕರೂ ಸೇರಿದಂತೆ ಸುಮಾರು 50 ಮಂದಿ ಶಾಸಕರು ಶಿಂಧೆ ಜತೆ ಹೋಟೆಲ್‌ನಲ್ಲಿ ಇದ್ದಾರೆ ಎನ್ನಲಾಗಿದೆ.