ಬಾಗಲಕೋಟೆ: ಸರ್ಕಾರದ ವಿವಿಧ ಇಲಾಖೆಗಳ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಬಾಗಲಕೋಟೆ ಜಿಲ್ಲಾ ಪೊಲೀಸ್ ಇಂದು ಸಿಐಡಿಗೆ ಹಸ್ತಾಂತರಿಸಿದ್ದಾರೆ.
ಜಿಲ್ಲೆಯ ಪ್ರವಾಸೋದ್ಯಮ, ಅಲ್ಪಸಂಖ್ಯಾತ, ಕಾರ್ಮಿಕ, ಕೈಮಗ್ಗ-ಜವಳಿ, ಹಿಂದುಳಿದ ವರ್ಗಗಳ ಇಲಾಖೆಗಳಲ್ಲಿ 6 ಕೋಟಿ 8 ಲಕ್ಷ ರೂ. ಹಣವನ್ನು ವಿವಿಧ ಖಾತೆಗಳಿಗೆ ಬ್ಯಾಂಕ್ ಸಿಬ್ಬಂದಿಯಿಂದ ಅಕ್ರಮ ವರ್ಗಾವಣೆ ಮಾಡಲಾಗಿತ್ತು.
ಇಲಾಖೆಗಳ ಹಣ ಒಟ್ಟು 33 ವಿವಿಧ ಖಾತೆಗಳಿಗೆ ವರ್ಗಾವಣೆ ಆಗಿತ್ತು. ಇದುವರೆಗೆ ಬ್ಯಾಂಕ್ನ 9 ಸಿಬ್ಬಂದಿ ಸೇರಿ 19 ಆರೋಪಿಗಳನ್ನು ಬಂಧಿಸಲಾಗಿದೆ. 3 ಕೋಟಿ ರೂ. ಹೆಚ್ಚು ಅವ್ಯವಹಾರ ಹಿನ್ನೆಲೆ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಆ.26ರಂದು ಬಾಗಲಕೋಟೆಗೆ ಸಿಐಡಿ ಅಧಿಕಾರಿಗಳ ತಂಡ ಆಗಮಿಸಲಿದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ.
ಐದು ಇಲಾಖೆಯಲ್ಲಿ ಹಣ ಕೂಡ ಅಕ್ರಮ ವರ್ಗಾವಣೆಯಾಗಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ 79 ಲಕ್ಷ 75 ಸಾವಿರ ರೂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ 86 ಲಕ್ಷ 40 ಸಾವಿರ ರೂ, ಕೈಮಗ್ಗ ಮತ್ತು ಜವಳಿ ಇಲಾಖೆಯ 18 ಲಕ್ಷ 15 ಸಾವಿರ ರೂ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ 1 ಕೋಟಿ 76 ಲಕ್ಷದ 58 ಸಾವಿರ ರೂ, ಐಡಿಬಿಐ ಬ್ಯಾಂಕ್‌ನಲ್ಲಿದ್ದ ಒಟ್ಟು ಐದು ಇಲಾಖೆಯ 6 ಕೋಟಿ ರೂ. ವಂಚನೆ ಹೊರಬಿದ್ದಿದೆ.
ಇತರೆ ಇಲಾಖೆಗಳ ವಂಚನೆಯಲ್ಲೂ ಬ್ಯಾಂಕ್ ಸಿಬ್ಬಂದಿಗಳದ್ದೇ ಕೈವಾಡ ಬಹುತೇಕ ಖಚಿತವಾಗಿದ್ದು, ಪರಿಶೀಲನೆ ಮುಂದುವರೆದಿದೆ. ಇನ್ನು ಇದರಲ್ಲಿ ಐದು ಇಲಾಖೆಯ ಅಧಿಕಾರಿಗಳ ಪಾತ್ರ ಇದ್ದೇ ಇರುತ್ತದೆ, ಇಲಾಖೆ ಸಿಬ್ಬಂದಿಯನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಬಾಗಲಕೋಟೆ ಐಡಿಬಿಐ ಬ್ಯಾಂಕ್ ಗುತ್ತಿಗೆ ನೌಕರ ಸೇಲ್ಸ್ ಎಕ್ಸಿಕ್ಯೂಟಿವ್ ಸೂರಜ್ ಸಗರ ಮೊದಲ ಆರೋಪಿ ಕಿಂಗ್ಪಿನ್ 2021 ರಿಂದ 2024ರವರೆಗೆ 54 ಬಾರಿ 33 ಖಾತೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಡಿಬಿಐ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ಗಳಾದ ನಿಶಾ ಹಾಗೂ ಸರಸ್ವತಿ ಬ್ಯಾಂಕ್ ಪಬ್ಲಿಕ್ ರಿಲೇಷನ್ಶಿಪ್ ಆಫಿಸರ್ ವಿದ್ಯಾಧರ ಹಿರೆಮಠ, ಲೋನ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ರೋಹಿತ್, ಹಣ ಹಾಕಿಸಿಕೊಂಡ 14 ಜನ ಸೇರಿ ಒಟ್ಟು 19 ಜನರನ್ನು ಬಂಧಿಸಲಾಗಿದೆ.