ಬಾಗಲಕೋಟೆ: ಕೊಲೆ, ಅಪಘಾತ, ಕೈ ಕಾಲು ಮುರಿಯಲು ಹಣ ಪಡೆದು ಡೀಲ್ ಮಾಡುತ್ತಿದ್ದ ಸುಪಾರಿ ಕಿಲ್ಲರ್ ಗ್ಯಾಂಗ್ ಅನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ. 3 ಲಕ್ಷದಿಂದ 30 ಲಕ್ಷ ರೂ.ಗಳ ವರೆಗೂ ಇವರು ಡೀಲ್ ಮಾಡುತಿದ್ದರು. ನಾಲ್ವರು ಸಹೋದರರು, ಓರ್ವ ಅಳಿಯ ಸೇರಿ ಐದು ಜನ ಇರುವ ಗ್ಯಾಂಗನ್ನು ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳು, ಅಪಘಾತ ಮಾಡಿ ಕೈಕಾಲು ಮುರಿಯಲು ಕೊಲೆ ಮಾಡಲು, ಲ್ಯಾಂಡ್ ವಿವಾದ ಬಗೆ ಹರಿಸಲು ಸುಪಾರಿ ತೆಗೆದುಕೊಳ್ಳುತ್ತಿದ್ದರು. ಪೊಲೀಸರು ಒಂದು ಕೊಲೆ ಪ್ರಕರಣವನ್ನು ಬೆನ್ನತ್ತಿದಾಗ ಈ ಗ್ಯಾಂಗ್ ರಹಸ್ಯ ಬೆಳಕಿಗೆ ಬಂದಿದೆ. ಬಾಗಲಕೋಟೆ ಪೊಲೀಸರ ಕರ್ತವ್ಯನಿಷ್ಠೆಯನ್ನು ಐಜಿಪಿ ವಿಕಾಸಕುಮಾರ್ ವಿಕಾಸ್ ಶ್ಲಾಘಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದಿದ್ದ ಕೊಲೆ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಸುಪಾರಿ ಕಿಲ್ಲರ್ ಗ್ಯಾಂಗ್ ಅನ್ನು ಪತ್ತೆ ಹಚ್ಚಿದ್ದಾರೆ. ಕೊಲೆ ಮಾಡುವುದು, ಭೂ ವಿವಾದಗಳನ್ನು ಇತ್ಯರ್ಥ ಪಡಿಸುವುದು ಹಾಗೂ ಅಪಘಾತ ನಡೆಸಿ ಕೈಕಾಲು ಮುರಿಯುವುದಕ್ಕಾಗಿ ಈ ಗ್ಯಾಂಗ್ ಕಳೆದ ಹತ್ತು ವರ್ಷಗಳಿಂದ ಸುಪಾರಿ ಪಡೆಯುತ್ತಿತ್ತು. ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಮಾರ್ಗದರ್ಶನದ ತನಿಖಾ ತಂಡ ಈ ಗ್ಯಾಂಗ್ನ ಬಂಧಿಸಿದೆ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ್ ವಿಕಾಸ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕಳೆದ ಮೇ ತಿಂಗಳಲ್ಲಿ ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಅನಗವಾಡಿ ಸೇತುವೆ ಬಳಿಯ ಘಟಪ್ರಭಾ ನದಿಯಲ್ಲಿ ಸಿಕ್ಕಿದ್ದ ಅಪರಿಚಿತ ಶವದ ಪ್ರಕರಣ ಬೆನ್ನು ಹತ್ತಿದಾಗ ಕಿಲ್ಲರ್ ಗ್ಯಾಂಗ್ ಸಿಕ್ಕಿಬಿದ್ದಿದೆ. ಬಾಗಲಕೋಟೆ ತಾಲೂಕಿನ ಸೊಕನಾದಗಿ ಗ್ರಾಮದ ಪ್ರಕಾಶ್ ಕೃಷ್ಣಪ್ಪ ಮಾದರ, ಬಸವರಾಜ ಮಾದರ, ಗಣೇಶ್ ಮಾದರ, ಮಂಜುನಾಥ್ ಮಾದರ ಹಾಗೂ ಇವರ ಅಳಿಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಭೀರಪ್ಪ ಶೆಟ್ಟೆಪ್ಪ ಬರಗಿ ಸುಪಾರಿ ಕಿಲ್ಲರ್ ಗ್ಯಾಂಗ್ ನ ಸದಸ್ಯರು. ಕಿಲ್ಲರ್ ಗ್ಯಾಂಗ್ ಒಟ್ಟು ಏಳು ಪ್ರಕರಣದಲ್ಲಿ ಬಾಗಿ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇವರು ಕನಿಷ್ಠ 3 ಲಕ್ಷ ರೂ.ಗಳಿಂದ ಗರಿಷ್ಠ 30 ಲಕ್ಷ ರೂ.ಗಳ ವರೆಗೂ ಸುಪಾರಿ ಪಡೆಯುತ್ತಿದ್ದರು.
ಸದ್ಯ ಒಟ್ಟು ಮೂರು ಕೊಲೆ ಪ್ರಕರಣದಲ್ಲಿ ಈ ಗ್ಯಾಂಗ್ ಸುಪಾರಿ ಪಡೆದಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಡರಕೊಪ್ಪ ಗ್ರಾಮದ ಕೊಲೆ ಪ್ರಕರಣದಲ್ಲಿ ಸುಪಾರಿ ಪಡೆದಿರುವ ಶಂಕೆ ವ್ಯಕ್ತವಾಗಿದೆ.
ಹಣ ಪಡೆದು ಅಪರಾಧ ಕೃತ್ಯ ನಡೆಸಲು ಒಪ್ಪಿಕೊಳ್ಳುತ್ತಿದ್ದ ಆರೋಪಿಗಳು, ದೃಶ್ಯಂ ಚಿತ್ರದಲ್ಲಿ ನಾಯಕ ಯಾವ ರೀತಿ ಕೊಲೆಯ ಸುಳಿವು ಸಿಗದಂತೆ ಪೊಲೀಸರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದನೋ ಅದೇ ರೀತಿ ಇವರು ಕೂಡ ಸುಳಿವನ್ನು ಅಳಿಸಿ ಹಾಕುತ್ತಿದ್ದರು. ಸದ್ಯ ಕಲಾದಗಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಇವರೆಲ್ಲ ಸಿಕ್ಕಿ ಬಿದ್ದಿದ್ದಾರೆ. ಬಾಗಲಕೋಟೆ ಮಾತ್ರವಲ್ಲದೇ ವಿಜಯಪುರ, ಬೆಳಗಾವಿ ಜಿಲ್ಲೆಯಲ್ಲೂ ಕೃತ್ಯ ನಡೆಸಿರುವ ಮಾಹಿತಿ ಸಿಕ್ಕಿದೆ.