ಬಾಗಲಕೋಟೆ: ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ ಎಸ್ ಸಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದು ಅಪಾರ ಹಾನಿ ಆಗಿದೆ. ರಾತ್ರಿ ವೇಳೆ ಕುಸಿದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಈ ಸರ್ಕಾರಿ ಶಾಲೆಯು 150 ವರ್ಷದ ಹಳೆಯ ಹಂಚಿನ ಮೇಲ್ಚಾವಣಿದ್ದರಿಂದ ಮಳೆಗೆ ಕುಸಿದು ಬಿದ್ದಿದೆ. ಶಾಲೆಯ ಒಟ್ಟು ಐದು ಕಟ್ಟಡಗಳು ಹಂಚಿನ ಮೇಲ್ಛಾವಣಿ ಹೊಂದಿದ್ದು, ಮಳೆಗೆ 3 ಕಟ್ಟಡಗಳ ಮೇಲ್ಚಾವಣಿಗಳು ಕುಸಿದು ಬಿದ್ದಿವೆ. ಇನ್ನು ಎರಡು ಕೊಠಡಿಗಳು ಬೀಳುವ ಹಂತದಲ್ಲಿವೆ. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಕಟ್ಟಡ ಹಳೆಯದಾಗಿದ್ದು ಶಾಲೆಯನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮುಖ್ಯ ಗುರುಗಳಾದ ಎಂ.ಜಿ. ಮಾದರ ತಿಳಿಸಿದ್ದಾರೆ.
ಶಾಲೆಯಲ್ಲಿ 389 ವಿದ್ಯಾರ್ಥಿಗಳು ಓದುತ್ತಿದ್ದು ಆದಷ್ಟು ಬೇಗನೆ ಅಧಿಕಾರಿಗಳು ಶಾಲೆಯನ್ನು ದುರಸ್ತಿಗೊಳಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.