ಮನೆ ಸ್ಥಳೀಯ ನೀರಿನ ತೆರಿಗೆ ಬಾಕಿಯನ್ನು ಕಟ್ಟಲು ಒಂದು ಬಾರಿ ಪರಿಹಾರದ ಪ್ರಸ್ತಾವನೆ ಸಲ್ಲಿಸುವಂತೆ ಮೈಸೂರು ಮಹಾನಗರ ಪಾಲಿಕೆಯ...

ನೀರಿನ ತೆರಿಗೆ ಬಾಕಿಯನ್ನು ಕಟ್ಟಲು ಒಂದು ಬಾರಿ ಪರಿಹಾರದ ಪ್ರಸ್ತಾವನೆ ಸಲ್ಲಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಬೈರತಿ ಸುರೇಶ್ ಸೂಚನೆ

0

ಬೆಂಗಳೂರು: ನೀರಿನ ತೆರಿಗೆ ಬಾಕಿಯನ್ನು ಕಟ್ಟಲು ಒಂದು ಬಾರಿ ಪರಿಹಾರದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್ ಸುರೇಶ್ (ಬೈರತಿ) ರವರು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

Join Our Whatsapp Group


ವಿಧಾನಸೌದದ ಸಮಿತಿ ಕೊಠಡಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತಂತೆ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿರುತ್ತಾರೆ.


ನೀರಿನ ತೆರಿಗೆ ಬಾಕಿ ಇಲ್ಲಿವರೆಗೂ ರೂ. 200 ಕೋಟಿಗಳು ಇದ್ದು, ಇದು ಅಸಲು ಬಡ್ಡಿ ಸೇರಿದಂತೆ ಇರುತ್ತದೆ. ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದವರೇ ಬಾಕಿ ಉಳಿಸಿ ಕೊಂಡಿರುವುದರಿಂದ ಬಡ್ಡಿಯನ್ನು ಮನ್ನಾ ಮಾಡಿ ಅಸಲನ್ನು ಕಟ್ಟುವುದಕ್ಕೆ ಸರ್ಕಾರ ಅನುಮತಿ ನೀಡುವ ಚಿಂತನೆ ನಡೆಸಿದ್ದು, ಇದಕ್ಕಾಗಿ ಪಾಲಿಕೆ ವತಿಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿರುತ್ತಾರೆ.
ಇದಲ್ಲದೆ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಇರುವ ವಾಹನಗಳ ವಾರ್ಷಿಕ ದುರಸ್ಥಿ ಮಾಡಲು ಕಳೆದ 5 ವರ್ಷಗಳಿಂದ ಟೆಂಡರ್ ಕರೆಯದೆ ಒಬ್ಬರಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಟೆಂಡರ್ ಕರೆಯದೆ ಏಕೆ ನೀಡುತ್ತಿದ್ದೀರಿ ಎಂದು ಮಾನ್ಯ ಸಚಿವರಾದ ಶ್ರೀ ಬೈರತಿ ಸುರೇಶ ರವರು ಪ್ರಶ್ನಿಸಿದರು.


ಟೆಂಡರ್ ಕರೆಯದೆ ಏಕ ವ್ಯಕ್ತಿಗೆ ನೀಡಿರುವುದು ಲೋಪವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 15 ದಿನಗಳೊಳಗೆ ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.


ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳನ್ನು ಅದಷ್ಟು ಬೇಗ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ನೀಡಲು ಮುಂದಾಗ ಬೇಕು ಎಂದು ಹೇಳಿದರು.


ಮೈಸೂರು ಮಹಾನಗರ ಪಾಲಿಕೆಯಲ್ಲಿ 158 ಪೌರ ಕಾರ್ಮಿಕರಿಗೆ ಜಿ+3 ಮಾದರಿಯಲ್ಲಿ ಸಮುಚ್ಚಯ ನಿರ್ಮಾಣ ಕಾಮಗಾರಿಯಲ್ಲಿ ಶೇ. 45 ರಷ್ಟು ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಇದಕ್ಕೆ ತೃಪ್ತರಾಗದ ಸಚಿವರು ಹಣಕಾಸಿನ ಕೊರತೆ ಇಲ್ಲ ಕಾಮಗಾರಿ ಬೇಗ ಮುಗಿಸಲು ಏನು ಅಡೆತಡೆಗಳಿದೆ ಎಂದು ಪ್ರಶ್ನಿಸಿದ್ದಲ್ಲದೆ ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.


ಬೆಂಗಳೂರಿನಷ್ಟೇ ವೇಗವಾಗಿ ಮೈಸೂರು ಬೆಳೆಯುತ್ತಿದ್ದು, ಇದನ್ನು ಪಾರಂಪರಿಕ ನಗರಿ, ಅರಮನೆ ನಗರಿ ಎಂದು ಕರೆಯುತ್ತಾರೆ. ಪ್ರವಾಸಿಗರ ಭೇಟಿಯ ಸಂಖ್ಯೆಯು ಹೆಚ್ಚಾಗಿದ್ದು, 2023-24ನೇ ಸಾಲಿಗೆ ಕೇವಲ 70 ಕೋಟಿ ರೂಪಾಯಿಗಳು ಜಾಹೀರಾತಿನಿಂದ ಆದಾಯ ಎಂದು ಅಂದಾಜಿಸಿರುವುದು ಸರಿಯಲ್ಲ.


ಮೈಸೂರು ನಗರದಲ್ಲಿ ಎಲ್ಲಿ ನೋಡಿದರು ಬೃಹದಾಕರದ ಜಾಹೀರಾತು ಫಲಕಗಳು ಕಾಣುತ್ತವೆ ಹೀಗಿದ್ದು, ಆದಾಯದ ಅಂದಾಜನ್ನು ನೀವೆ ನಿರ್ಧಾರಿಸುವುದು ಸರಿಯಲ್ಲ. ಇದನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
9 ಜಾಹೀರಾತು ಏಜೆನ್ಸಿಗಳು ಮೈಸೂರಿನಲ್ಲಿದ್ದು, ಕೇವಲ ಒಬ್ಬರೆ ಭಾಗವಹಿಸುವುದು, ಅವರಿಗೆ ನೀಡುವುದು ಸರಿಯಾದ ಕ್ರಮವಲ್ಲ. ಟೆಂಡರ್ ಪ್ರಕ್ರಿಯೆ ನಿಯಮಾನುಸಾರ ನಡೆದು ಎಲ್ಲಾರಿಗೂ ಸಿಗುವಂತೆ ಆಗಬೇಕು ಎಂದು ಸಚಿವರು ಸೂಚಿಸಿದರು.


ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2 ಲಕ್ಷ 27 ಸಾವಿರದ 893 ಆಸ್ತಿಗಳಿದ್ದು, ಇವುಗಳಿಗೆ ಸರಿಯದ ಕರ ನಿರ್ಧಾರವಾಗಬೇಕು. ಪ್ರಸಕ್ತ ಸಾಲಿನಲ್ಲಿ ತಾವು ಹಾಕಿಕೊಂಡಿರುವ ಬೇಡಿಕೆ ರೂ. 162 ಕೋಟಿಗಳಿದ್ದು, ನಿಯಮಾನುಸಾರ ತೆರಿಗೆ ನಿರ್ಧಾರಣೆ ಮತ್ತು ವಸೂಲಾತಿ ಮಾಡಿದರೆ ಅದು ರೂ. 180 ಕೋಟಿ ದಾಟ್ಟುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆಗೆ ಎಲ್ಲಾ ವಲಯದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.


ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 11 ಇಂದಿರಾ ಕ್ಯಾಂಟಿನ್ ಇದ್ದು, ಮತ್ತೆ 2 ಅನ್ನು ಕಟ್ಟಲು ಸರ್ಕಾರ ಅನುಮತಿ ನೀಡಲು ಅಧಿಕಾರಿಗಳು ಕೇಳಿದಾಗ ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುತ್ತದೆ. ಸರ್ಕಾರ ಬಡವರ ಪರವಾಗಿದ್ದು, ಇಂದಿರಾ ಕ್ಯಾಂಟಿನ್ ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಬೈರತಿ ಸುರೇಶ್ ಸೂಚಿಸಿದರು.
ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಹೀಗಾಗಿ ಕಾಮಗಾರಿಗಳನ್ನು ಅದಷ್ಟು ಬೇಗ ಪೂರ್ಣಗೊಳಿಸಲು ಶೀಘ್ರ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಬೇಕೆಂದು ಸಹ ಸೂಚಿಸಿದರು.


ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಬೇಕು ಲೋಪಗಳು ಕಂಡುಬಂದಲ್ಲಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಹಿಂಜರಿಯಬಾರದು. ನಗರದ ಕೆಲ ಪ್ರದೇಶಗಳಲ್ಲಿ ಗುಂಡಿಗಳು ಬಿದಿದ್ದು, ಗುಂಡಿಗಳನ್ನು ಮುಚ್ಚುವ ಕಾರ್ಯ ಅದಷ್ಟು ಬೇಗ ಆಗಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.


ಸಾರ್ವಜನಿಕರ ಅಹಾವಾಲುಗಳು, ಕುಂದುಕೊರತೆಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಇ-ಆಫೀಸ್ನ್ನು ಅದಷ್ಟು ಬೇಗ ಅನುಷ್ಟಾನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಇ-ಆಫೀಸ್ ಬಂದು ಇಷ್ಟು ವರ್ಷವಾದರು ಇದನ್ನ ಏಕೆ ಅಳವಡಿಸಿಲ್ಲವೆಂದು ಪ್ರಶ್ನಿಸಿದ ಸಚಿವರು 1 ವಾರದೊಳಗೆ ಆಗ ಬೇಕು ಎಂದರು.


ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ ಎಂ.ಎನ್, ಪೌರಾಡಳಿತ ನಿರ್ದೇಶನಾಲಯದ ನಿದೇಶಕರಾದ ಎನ್. ಮಂಜುಶ್ರೀ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಅಶಾದ್ ರೆಹ್ಮಾನ್ ಶರೀಫ್, ಹೆಚ್ಚುವರಿ ಆಯುಕ್ತರಾದ ರೂಪ, ಅಧೀಕ್ಷಕ ಅಭಿಯಂತರರಾದ ಸಿಂಧೂ ಸೇರಿದಂತೆ ಪಾಲಿಕೆ ಹಿರಿಯ ಅಧಿಕಾರಿಗಳ ಉಪಸ್ಥಿತರಿದ್ದರು.]

ಹಿಂದಿನ ಲೇಖನಹೆಚ್.ಡಿ.ಕುಮಾರಸ್ವಾಮಿ ಅವರು ಚೇತರಿಕೆ, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್: ನಿಖಿಲ್ ಕುಮಾರಸ್ವಾಮಿ
ಮುಂದಿನ ಲೇಖನಮದ್ದೂರು: ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ