ಮನೆ ಸುದ್ದಿ ಜಾಲ ದೇಶಾದ್ಯಂತ ಬಕ್ರೀದ್‌ ಸಂಭ್ರಮ; ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತ ಪ್ರಾರ್ಥನೆ

ದೇಶಾದ್ಯಂತ ಬಕ್ರೀದ್‌ ಸಂಭ್ರಮ; ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತ ಪ್ರಾರ್ಥನೆ

0

ಶ್ರೀನಗರ: ದೇಶಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ್‌ ಹಬ್ಬವನ್ನು ಸಂಭ್ರಮದಿಂದ, ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ. ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಹಾಗೂ ಬಲಿದಾನದ ಸ್ಮರಣೆಯ ದಿನವಾದ ಈ ಹಬ್ಬವನ್ನು ಭಾರತಾದ್ಯಂತ ಶಾಂತಿಯುತವಾಗಿ ಮತ್ತು ಭಕ್ತಿಯಿಂದ ಆಚರಣೆ ನಡೆಸಲಾಗಿದೆ.

ಭಯೋತ್ಪಾದಕ ದಾಳಿಯಿಂದ ಬೆಚ್ಚಿದ್ದ ಪಹಲ್ಗಾಮ್ ಪ್ರದೇಶದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಬಕ್ರೀದ್ ಹಬ್ಬ ಶಾಂತಿಯುತವಾಗಿ ಆಯೋಜನೆಯಾಗಿದೆ. ವಿಶೇಷವಾಗಿ ಶ್ರೀನಗರದ ಸೋನ್ವಾರ್‌ನ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ನಮಾಜ್‌ ಸಲ್ಲಿಸಿದ್ದಾರೆ.ಉತ್ತರ ಪ್ರದೇಶದ ಸಂಭಾಲ್‌, ಬಿಹಾರದ ಪಾಟ್ನಾದ ಗಾಂಧಿ ಮೈದಾನ, ನವದೆಹಲಿ, ಮತ್ತು ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮುಸ್ಲಿಂ ಸಮುದಾಯ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದೆ.

ಬಕ್ರೀದ್ ಅಥವಾ ಇದ್ ಅಲ್ ಅದ್ಹಾ, ಇಸ್ಲಾಂ ಧರ್ಮದ ಪ್ರಕಾರ ಪ್ರವಾದಿ ಇಬ್ರಾಹಿಂ ತಮ್ಮ ಪುತ್ರ ಇಸ್ಮಾಯಿಲ್ ಅವರನ್ನು ಅಲ್ಲಾಹ್‌ನ ಆದೇಶದಂತೆ ಬಲಿಕೊಡಲು ಸಿದ್ಧರಾಗಿದ್ದರು. ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿಯರ್ಪಿಸುವಂತೆ ಸೂಚಿಸುತ್ತಾರೆ. ಇದು ತಮ್ಮ ಧರ್ಮಗ್ರಂಥಗಳಲ್ಲೂ ಉಲ್ಲೇಖವಾಗಿದೆ ಎಂದು ಮುಸ್ಲಿಂ ಧರ್ಮಗುರುಗಳು ಹೇಳಿದ್ದಾರೆ. ಈ ದಿನ ಮುಸ್ಲಿಂ ಸಮುದಾಯವು ಜಾನುವಾರಗಳ ಬಲಿಕೊಟ್ಟು, ಆ ಮಾಂಸದ ಕೆಲವು ಭಾಗಗಳನ್ನು ಬಡವರಿಗೆ ಹಂಚುವ ಮೂಲಕ ತ್ಯಾಗ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಜಗತ್ತಿಗೆ ಸಾರುತ್ತಾರೆ.