ಮನೆ ರಾಜ್ಯ ವಿಧಾನಸೌಧದಲ್ಲಿ ರಾಸಾಯನಿಕಯುಕ್ತ ಅರಿಶಿನ–ಕುಂಕುಮ ನಿಷೇಧ ಹೊಸತೇನಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ವಿಧಾನಸೌಧದಲ್ಲಿ ರಾಸಾಯನಿಕಯುಕ್ತ ಅರಿಶಿನ–ಕುಂಕುಮ ನಿಷೇಧ ಹೊಸತೇನಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

0

ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ವೇಳೆ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸದಂತೆ ಹೊರಡಿಸಿದ್ದ ಸುತ್ತೋಲೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿದ್ದು, ಈ ಕಟ್ಟಡಗಳಲ್ಲಿ ಆಯುಧ ಪೂಜೆ ಮಾಡುವಾಗ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ರಾಸಾಯನಿಕ ಮಿಶ್ರಿತವಾದ ಬಣ್ಣ, ಅರಿಶಿನ, ಕುಂಕುಮ ಮತ್ತು ಸುಣ್ಣವನ್ನು ಬಳಸಬಾರದು.

ಪಾರಂಪರಿಕ ಕಟ್ಟಡಗಳ ಸೌಂದರ್ಯ ರಕ್ಷಿಸುವುದು ಅಧಿಕಾರಿಗಳು ಮತ್ತು ನೌಕರರ ಕರ್ತವ್ಯ. ಈ ವಿಚಾರದಲ್ಲಿ ಸ್ಪಂದಿಸದೇ ಇದ್ದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು.

ಸಂಸದ ತೇಜಸ್ವಿ ಸೂರ್ಯ ಟೀಕೆ

ರಾಜ್ಯ ಸರ್ಕಾರದ ಕ್ರಮವನ್ನು ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದರು. ಎರಡು ರಾಜ್ಯ, ಎರಡು ಸರ್ಕಾರ ಆಯುಧ ಪೂಜೆಯನ್ನು ಗುರಿಯಾಗಿಸಿವೆ ಎಂದು ಕಿಡಿಕಾರಿದ್ದರು.

ನಿಷೇಧ ಹೊಸದಲ್ಲ: ಸಿಎಂ

ತೇಜಸ್ವಿ ಸೂರ್ಯ ಟೀಕೆಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ,’ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಹೊಸದೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಆಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಹಾಗೆಯೇ, ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ಹಿಂದಿನ ಲೇಖನಡಿಕೆಶಿಗೆ ಬಿಗ್ ಶಾಕ್: ಸಿಬಿಐ ತನಿಖೆಗೆ ಅಸ್ತು ಎಂದ ಹೈಕೋರ್ಟ್
ಮುಂದಿನ ಲೇಖನಚಾಮರಾಜನಗರ: ಕೆನರಾ ಬ್ಯಾಂಕ್’ನಲ್ಲಿ 5 ಲಕ್ಷ ರೂ. ಕಳವು