ಮನೆ ರಾಜ್ಯ ಫೆ.7 ರಂದು ಮಂಡ್ಯ ನಗರ ಬಂದ್

ಫೆ.7 ರಂದು ಮಂಡ್ಯ ನಗರ ಬಂದ್

0

ಮಂಡ್ಯ: ಜಿಲ್ಲೆಯ ಸೌಹಾರ್ದ ಮತ್ತು ಶಾಂತಿಯನ್ನು ಕದಡುತ್ತಿರುವ ಶಕ್ತಿಗಳ ವಿರುದ್ಧ ಫೆ.7 ರಂದು ಮಂಡ್ಯ ನಗರ ಬಂದ್ ಗೆ ಪ್ರಗತಿಪರ ಸಂಘಟನೆಗಳು ಕರೆ ನೀಡಿವೆ.

ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಮಂಡ್ಯ ಜಿಲ್ಲೆಯ ಸೌಹಾರ್ದ ಪರಂಪರೆಗೆ ಮಸಿ ಬಳಿದು, ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸುತ್ತಿರುವ ಶಕ್ತಿಗಳ ವಿರುದ್ಧ ಬಂದ್ ಮಾಡುವ ಮೂಲಕ ಮಂಡ್ಯ ಜಿಲ್ಲೆಯನ್ನು ಸೌಹಾರ್ದದ ನೆಲೆಯಾಗಿ ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶ ಕೊಡಲು ಪ್ರಗತಿಪರ ಸಂಘಟನೆಗಳು ಮುಂದಾಗಿವೆ,

ಜಂಟಿ ಸುದ್ದಿಗೋಷ್ಠಿಯಲ್ಲಿ ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ,ಸಮಾನ ಮನಸ್ಕರ ವೇದಿಕೆ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ,ಕರ್ನಾಟಕ ಪ್ರಾಂತ ರೈತ ಸಂಘದ ಟಿ.ಎಲ್.ಕೃಷ್ಣೇಗೌಡ ಮಾತನಾಡಿ ಫೆ.7 ರಂದು ಮಂಡ್ಯ ನಗರವನ್ನು ಸ್ವಯಂಪ್ರೇರಿತ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಬೇಕು,ಅಂದು ರಾಷ್ಟ್ರ ಧ್ವಜವನ್ನು ಹಿಡಿದು ಬೃಹತ್ ಮೆರವಣಿಗೆ ನಡೆಸಿ ಶಾಂತಿ ಮತ್ತು ಸೌಹಾರ್ದ ಕಾಪಾಡಿಕೊಳ್ಳಲು ಜನತೆಯಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಜಾತ್ಯಾತೀತ, ಶಾಂತಿಪ್ರಿಯ,ಸೌಹಾರ್ದ ಬಯಸುವ ಜನತೆ ಬಂದ್‌ ಬೆಂಬಲಿಸಬೇಕೆಂದು ಮನವಿ ಮಾಡಿದ ಅವರು,ಕಾನೂನು ಮುರಿಯುವ ಮತ್ತು ಶಾಂತಿ ಕದಡುವ ಶಕ್ತಿಗಳ ಮೇಲೆ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ವಿಕೃತ ಮನಸ್ಸಿನ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕುರುಬ ಸಮುದಾಯ ನಡೆಸುತ್ತಿರುವ ವಿದ್ಯಾರ್ಥಿ ನಿಲಯದ ಮೇಲೆ ದಾಳಿ ಮಾಡಿದ ಕೃತ್ಯ ಖಂಡನೀಯ,ಒಂದು ಸಮುದಾಯ ನಡೆಸುವ ಹಾಸ್ಟೆಲ್‌ಗೆ ಅಕ್ರಮವಾಗಿ ನುಗ್ಗಿ ಧಾಂದಲೆ ನಡೆಸಿ ಪ್ಲೆಕ್ಸ್ ಹರಿದು ಹಾಕಿರುವುದು ಪುಂಡಾಟಿಕೆಯ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ದುರ್ವತನೆಯಾಗಿದೆ. ಇಂತಹ ಪುಂಡರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ವರ್ತಿಸಬೇಕು. ಮಂಡ್ಯ ಜಿಲ್ಲೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ಹೋರಾಡಲಿ,ಅದು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡಬಾರದು. ಜನರನ್ನು ಭಾವನಾತ್ಮಕ ವಿಷಯಗಳ ಮೇಲೆ ಕೆರಳಿಸಿ ಬದುಕಿನ ಪ್ರಶ್ನೆಗಳನ್ನು ಮೂಲೆಗೆ ತಳ್ಳುವ ನೀಚ ರಾಜಕಾರಣವನ್ನು ಯಾವುದೇ ಸಂಘಟನೆ ಅಥವಾ ಪಕ್ಷ ಮಾಡಬಾರದೆಂದು ಪ್ರಗತಿಪರ ಸಂಘಟನೆಗಳು ಆಗ್ರಹಿಸುತ್ತವೆ ಎಂದರು.

ಜಿಲ್ಲೆಯ ಹಿಂದೂಗಳಿಗೆ ವಿವೇಕಾನಂದ,ಒಕ್ಕಲಿಗರಿಗೆ ಕುವೆಂಪು,ಕೆ.ವಿ.ಶಂಕರಗೌಡ, ವೀರಣ್ಣಗೌಡ,ಜಿ.ಮಾದೇಗೌಡರು ಮಾದರಿಯಾಗಬೇಕೆ ಹೊರತು ಭಾವನೆಗಳಿಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವ ಕೀಚಕರಲ್ಲ, ಹಾಗಾಗಿ ನಾವೆಲ್ಲಾ ವಿವೇಕಾನಂದ, ಕುವೆಂಪು,ಶಂಕರಗೌಡ, ವೀರಣ್ಣಗೌಡ,ಮಾದೇಗೌಡರ ಹಾದಿಯಲ್ಲಿ ಕೈ, ಕೈ ಹಿಡಿದು ನಡೆಯೋಣ ಎಂದು ಜಿಲ್ಲೆಯ ಯುವಜನರಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಬಿ. ಬೊಮ್ಮೇಗೌಡ,ಸಿಐಟಿಯುನ ಸಿ.ಕುಮಾರಿ, ಟಿ.ಎಲ್ ಕೃಷ್ಣೇಗೌಡ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಟಿ.ಡಿ.ಬಸವರಾಜು, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಕರ್ನಾಟಕ ರಕ್ಷಣಾ ವೇದಿಕೆಯ ಎಚ್.ಡಿ.ಜಯರಾಮ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಎಂ.ವಿ.ಕೃಷ್ಣ,ನರಸಿಂಹಮೂರ್ತಿ ಇತರರಿದ್ದರು.

ಹಿಂದಿನ ಲೇಖನಕೆರೆಗೋಡು ಘಟನೆ ಬಿಜೆಪಿಯ ಧ್ರುವೀಕರಣ ತಂತ್ರದ ಭಾಗ: ಎಂ ಬಿ ಪಾಟೀಲ
ಮುಂದಿನ ಲೇಖನಫೆ.16ಕ್ಕೆ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿದ ‘ಅಲೆಮಾರಿ ಈ ಬದುಕು’ ತೆರೆಗೆ