ಬೆಂಗಳೂರು: ಖಾಸಗಿ ಸಾರಿಗೆ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ಸು ಕಂಡಿದ್ದು, ಗೊರಗುಂಟೆ ಪಾಳ್ಯ ಜಂಕ್ಷನ್ ಬಳಿ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ.
ರ‍್ಯಾಪಿಡೋ ಬೈಕ್, ಟ್ಯಾಕ್ಸಿ, ಓಲಾ, ಉಬರ್ ಕ್ಯಾಬ್ ಕಂಪನಿಗಳ ಫೋಟೋಗಳ ಅಣಕು ಶವಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಪೊಲೀಸರು ಪ್ರತಿಭಟನೆಗಷ್ಟೇ ಅನುಮತಿ ನೀಡಿದ್ದರು. ಆದರೆ, ಖಾಸಗಿ ವಾಹನ ಮಾಲೀಕರು, ಚಾಲಕರು ಸೇರಿದಂತೆ ಕೆಲವು ಸಂಘಟನೆಗಳು ರ‍್ಯಾಲಿ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ನಂತರ ಖಾಸಗಿ ವಾಹನಗಳನ್ನು ನಂಬಿ ಬದುಕುತ್ತಿದ್ದವರ ಆದಾಯ ಕಡಿಮೆಯಾಗಿದೆ. ಖಾಸಗಿ ವಾಹನ ಚಾಲಕರು, ಮಾಲೀಕರ ಬದುಕು ದುಸ್ತರವಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರದಿಂದ ಹೆಚ್ಚುವರಿ ಬಸ್ ವ್ಯವಸ್ಥೆ: ಖಾಸಗಿ ಸಾರಿಗೆ ಚಾಲಕರು, ಮಾಲೀಕರ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಗಳನ್ನು ರಸ್ತೆಗಿಳಿಸಲಾಗಿದೆ. ಅಲ್ಲದೇ ಮೆಟ್ರೋ ರೈಲು ಸಹ ಹೆಚ್ಚುವರಿ ಓಡಾಟ ನಡೆಸುತ್ತಿದೆ. ಆಟೋ, ಕ್ಯಾಬ್, ಶಾಲಾ ಬಸ್, ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್, ಕಾರ್ಪೊರೇಟ್ ಕಂಪನಿಗಳ ಕ್ಯಾಬ್, ಏರ್ ಪೋರ್ಟ್ ಕ್ಯಾಬ್ ಗಳ ಓಡಾಟ ಬಂದ್ ಎನ್ನಲಾಗಿತ್ತು. ಆದರೆ ನಗರದ ಅನೇಕ ಕಡೆಗಳಲ್ಲಿ ಖಾಸಗಿ ವಾಹನಗಳ ಓಡಾಟ ಕಂಡುಬಂದಿದೆ. ಹಲವೆಡೆ ಆಟೋ, ಕ್ಯಾಬ್ ಸೇರಿದಂತೆ ಖಾಸಗಿ ಸಾರಿಗೆ ವಾಹನಗಳು ಸಂಚರಿಸುತ್ತಿವೆ.
ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಮೆಜೆಸ್ಟಿಕ್ ನಿಂದ ಏರ್ ಪೋರ್ಟ್, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಎಲ್ಲಾ ಭಾಗಗಳಿಗೂ ಹೆಚ್ಚುವರಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬಂದ್ ಬಿಸಿ ತಟ್ಟದಂತೆ ಎಚ್ಚರಿಕೆ ವಹಿಸಲಾಗಿದೆ.