ಗುಂಡ್ಲುಪೇಟೆ: ಚಾಮರಾಜ ನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ದೇಶದಲ್ಲಿಯೇ ಅತ್ಯುತ್ತಮ ವನ್ಯಧಾಮ ಪ್ರಶಸ್ತಿಯನ್ನು ಎರಡನೇ ಬಾರಿಗೆ ಪಡೆದಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿಎ), ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ, ಅರಣ್ಯ ಮತ್ತು ಪರಿಸರ ಸಚಿವಾಲಯವು ಪ್ರತಿ ವರ್ಷ ಸಮೀಕ್ಷೆ ನಡೆಸಿ, ಈ ಪ್ರಶಸ್ತಿ ನೀಡುತ್ತದೆ.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಕೈಗೊಂಡ ಕ್ರಮಗಳು, ಪ್ರವಾಸಿಗರು, ಶುಚಿತ್ವ, ಸಿಬ್ಬಂದಿ ಕಾರ್ಯ ಮುಂತಾದ ಅಂಶಗಳ ಮಾನದಂಡಗಳ ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ದೇಶದ 54 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು.
ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೊದಲ ಸ್ಥಾನ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೂರನೇ ಸ್ಥಾನ ಲಭಿಸಿದೆ.
ಸಿಬ್ಬಂದಿ ಪರಿಶ್ರಮ, ಕಾಡಂಚಿನ ಗ್ರಾಮಗಳ ಜನರ ಸಹಕಾರದಿಂದ ಬಂಡೀಪುರ ವನ್ಯಧಾಮವು ಎರಡನೇ ಭಾರಿಗೆ ಅತ್ಯುತ್ತಮ ವನ್ಯಧಾಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ತಿಳಿಸಿದರು.