ಬೆಂಗಳೂರು: ರಾಜಧಾನಿಯಲ್ಲಿ ಜನತೆಯ ರಕ್ಷಣೆಗೆ ನೇಮಿತನಾಗಿರುವ ಪೊಲೀಸ್ ಅಧಿಕಾರಿಯೇ ಬ್ಯೂಟಿಷಿಯನ್‌ರೊಬ್ಬರ ಬಳಿ ದರೋಡೆ ಮಾಡಿದ ಆರೋಪದಡಿ ಎಫ್ಐಆರ್ ದಾಖಲಾಗಿದೆ. ನೆಲಮಂಗಲ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿವಮೊಗ್ಗ ಮೂಲದ ಸಿಂಚನ ಎಂಬ ಯುವತಿ ಬೆಂಗಳೂರಿನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ಸ್ವಂತ ಬ್ಯೂಟಿ ಪಾರ್ಲರ್ ಆರಂಭಿಸಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ತಾಯಿಯಿಂದ ₹2.5 ಲಕ್ಷ ನಗದು ಹಾಗೂ ಚಿನ್ನಾಭರಣ ಪಡೆದು ಬೆಂಗಳೂರು ಕಡೆ ತೆರಳಿದ್ದರು. 8ನೇ ಮೈಲಿ ಬಳಿಯ ಬಸ್ ನಿಲ್ದಾಣದಲ್ಲಿ ಇಳಿದು ಹೋಗುತ್ತಿದ್ದ ವೇಳೆ, ಜಿಎಪ್ ವಾಹನದಲ್ಲಿ ಬಂದ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ಅವರು ಆಕೆಗೆ ಡ್ರಾಪ್ ನೀಡುವುದಾಗಿ ಹತ್ತಿಸಿಕೊಂಡಿದ್ದಾನೆ.
ಆದರೆ, ವಾಹನದಲ್ಲಿ ಚಲಿಸುತ್ತಿರುವಾಗ ಆಕೆಯ ಬಳಿ ಇದ್ದ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಿದ ಆರೋಪ ಎದುರಾಗಿದೆ. ಸಿಂಚನ ಅವರು ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.















