ಮನೆ ಕಾನೂನು ಬೆಂಗಳೂರು ವಿವಿ ಇಬ್ಬರು ಸಿಂಡಿಕೇಟ್‌ ಸದಸ್ಯರ ನಾಮನಿರ್ದೇಶನ ವಾಪಸ್‌: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು ವಿವಿ ಇಬ್ಬರು ಸಿಂಡಿಕೇಟ್‌ ಸದಸ್ಯರ ನಾಮನಿರ್ದೇಶನ ವಾಪಸ್‌: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

0

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ಡಾ. ಗೋವಿಂದ ರಾಜು ಮತ್ತು ಪ್ರೇಮ್ ಸೋಹನ್‌ಲಾಲ್ ಅವರನ್ನು ನಾಮನಿರ್ದೇಶನ ಮಾಡಲಾಗಿದ್ದ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಮೂರು ತಿಂಗಳ ಕಾಲ ತಡೆಯಾಜ್ಞೆ ನೀಡಿದೆ.

ಸರ್ಕಾರದ ಆದೇಶ ಪ್ರಶ್ನಿಸಿ ಡಾ.ಗೋವಿಂದ ರಾಜು ಮತ್ತು ಪ್ರೇಮ್ ಸೋಹನ್‌ಲಾಲ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರಿದ್ದ ಏಕ ಸದಸ್ಯ ಪೀಠವು ವಿಚಾರಣೆ ನಡೆಸಿತು.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶಿತರಾದವರು ನಾಮ ನಿರ್ದೇಶಿಸಿದ ಪ್ರಾಧಿಕಾರ ನಿಗದಿಪಡಿಸಿದ ಸಮಯದವರೆಗೆ ಅಧಿಕಾರ ಹೊಂದಿರುತ್ತಾರೆ. ಆದರೆ, ಅರ್ಜಿದಾರರ ನಾಮನಿರ್ದೇಶನ ಹಿಂಪಡೆದಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಹೀಗಾಗಿ, ಪ್ರಕರಣವನ್ನು ಪರಿಶೀಲಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ನಾಮನಿರ್ದೇಶನ ಹಿಂಪಡೆದು 2022ರ ಏಪ್ರಿಲ್‌ 7ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮೂರು ತಿಂಗಳ ಕಾಲ ತಡೆಯಾಜ್ಞೆ ನೀಡಿದೆ. ಪ್ರತಿವಾದಿಗಳಾದ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು, ಅರ್ಜಿದಾರರ ಸ್ಥಾನಕ್ಕೆ ನಿಯೋಜನೆಗೊಂಡಿರುವ ಡಾ. ಸಿ ಆರ್ ಮಹೇಶ್ ಮತ್ತು ಡಾ.ಅನಿಲ್ ಕುಮಾರ್ ಈಶೋ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಅವರು “ಮೂರು ವರ್ಷದ ಅವಧಿಗೆ ಅರ್ಜಿದಾರರನ್ನು ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ 2019ರ ಡಿಸೆಂಬರ್‌ 10ರಂದು ಸರ್ಕಾರ ನಾಮ ನಿರ್ದೇಶನ ಮಾಡಿತ್ತು. ಅದರೆ, ಅಧಿಕಾರವಧಿ ಪೂರ್ಣಗೊಳ್ಳುವ ಮುನ್ನವೇ ಅರ್ಜಿದಾರರ ನಾಮ ನಿರ್ದೇಶನವನ್ನು ಹಿಂಪಡೆದು 2022ರ ಏಪ್ರಿಲ್‌ 7ರಂದು ಸರ್ಕಾರ ಆದೇಶಿಸಿದೆ. ಕರ್ನಾಟಕ ವಿಶ್ವವಿದ್ಯಾಯಗಳ ಕಾಯಿದೆ ಸೆಕ್ಷನ್ 39(1)(3) ಪ್ರಕಾರ ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಹಿಂಪಡೆಯಬೇಕಾದರೆ ಸದಸ್ಯರ ವಿರುದ್ಧ ಗಂಭೀರ ಆರೋಪ ಇರಬೇಕು. ಆ ಸಂಬಂಧ ವಿಚಾರಣೆ ನಡೆದು ದೋಷಿಯಾಗಿ ಸಾಬೀತಾದರೆ ಮಾತ್ರ ನಾಮ ನಿರ್ದೇಶನ ಹಿಂಪಡೆಯಬೇಕಾಗುತ್ತದೆ. ಪ್ರಕರಣದಲ್ಲಿ ಈ ನಿಯಮವನ್ನು ಪಾಲಿಸದೆ ಸರ್ಕಾರ ಅರ್ಜಿದಾರರ ವಿರುದ್ಧ ಕಾನೂನು ಬಾಹಿರ ಹಾಗೂ ಏಕಪಕ್ಷೀಯವಾಗಿ ಆದೇಶ ಹೊರಡಿಸಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡಿ 2019ರ ಡಿಸೆಂಬರ್‌ 10ರಂದು ಸರ್ಕಾರ ಆದೇಶ ಮಾಡಿತ್ತು. ಆದರೆ, ಅವರನ್ನು ವಜಾಗೊಳಿಸಿ 2022ರ ಏಪ್ರಿಲ್‌ 7ರಂದು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶಿಸಿದ್ದರು.