ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪತಿಯೇ ಪತ್ನಿಯನ್ನು ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದಿರುವ ಘಟನೆ ಕೋರಮಂಗಲದಲ್ಲಿ ಗುರುವಾರ ನಡೆದಿದೆ.
ಈಜಿಪುರ ನಿವಾಸಿ ಇಂದು (28) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಈಜಿಪುರ ನಿವಾಸಿ ಮೈಕಲ್ ಪ್ರಾನ್ಸಿಸ್ (31) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಕೋರಮಂಗಲದ 6ನೇ ಬ್ಲಾಕ್ ರಸ್ತೆಯಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದರು. ಪೇಟಿಂಗ್ ಕೆಲಸ ಮಾಡುವ ಮೈಕಲ್ ಪ್ರಾನ್ಸಿಸ್ ಮತ್ತು ಡಿಪಾರ್ಟ್‌ಮೆಂಟಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಇಂದು ಅವರನ್ನು 12 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಆರಂಭದಲ್ಲಿ ದಂಪತಿ ಚೆನ್ನಾಗಿದ್ದರು. ಈ ಮಧ್ಯೆ ಆರೋಪಿ ಮೈಕಲ್, ತನ್ನ ಪತ್ನಿ ಇಂದುಳ ಶೀಲ ಶಂಕಿಸಿ ಆಗಾಗ್ಗೆ ಜಗಳ ಮಾಡುತ್ತಿದ್ದ. ಅದರಿಂದ ಬೇಸತ್ತ ಇಂದು ಕಳೆದ 6 ತಿಂಗಳ ಹಿಂದೆ ಪತಿ ತೊರೆದು ಕೋರಮಂಗಲದ ವೆಂಕಟಾಪುರದಲ್ಲಿರುವ ತವರು ಮನೆಗೆ ಹೋಗಿದ್ದರು.
ಕೆಲ ದಿನಗಳ ಬಳಿಕ ಆರೋಪಿ ಮತ್ತೂಮ್ಮೆ ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸಿ ಆಕೆ ಮೇಲೆ ಹಲ್ಲೆ ನಡೆಸಿದ್ದ. ಅದರಿಂದ ನೊಂದ ಇಂದು ಮತ್ತೆ ತನ್ನ ತವರು ಮನೆಗೆ ಹೋಗಿದ್ದು, ಕೋರಮಂಗಲದಲ್ಲಿರುವ ಡಿಪಾರ್ಟ್‌ಮೆಂಟಲ್ ಸ್ಟೋರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಪತ್ನಿ ಕೆಲಸ ಮಾಡುವ ಜಾಗಕ್ಕೆ ಬಂದು ಗಲಾಟೆ ಮಾಡುತ್ತಿದ್ದ. ಅದರಿಂದ ಬೇಸತ್ತ ಇಂದು, ಬುಧವಾರ ಕೋರಮಂಗಲ ಠಾಣೆಗೆ ಗಂಡನ ವಿರುದ್ಧ ದೂರು ನೀಡಿದ್ದಳು. ಆದರಿಂದ ಪೊಲೀಸರು ಆರೋಪಿಗೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದರು. ಆದರೆ, ಆರೋಪಿ ಬಂದಿರಲಿಲ್ಲ. ಗುರುವಾರ ಮಧ್ಯಾಹ್ನ ಮತ್ತೂಮ್ಮೆ ಠಾಣೆಗೆ ಬಂದ ಇಂದು, ಪತಿಗೆ ಕರೆದು ಬುದ್ಧಿವಾದ ಹೇಳುವಂತೆ ಕೋರಿಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ಆದರಿಂದ ಮತ್ತೂಮ್ಮೆ ಆರೋಪಿಗೆ ಪೊಲೀಸರು ಕರೆ ಮಾಡಿ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಬಾರದಿದ್ದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕವಾಗಿ 10 ಬಾರಿ ಇರಿತ: ಹೀಗಾಗಿ ಮಧ್ಯಾಹ್ನ 3.30ರ ಸುಮಾರಿಗೆ ಠಾಣೆ ಸಮೀಪದ ಬಂದ ಆರೋಪಿ, ಪತ್ನಿಯನ್ನು ಕಂಡು ಆಕೆಯನ್ನು ಹಿಂಬಾಸಿಕೊಂಡು ಹೋಗಿದ್ದಾನೆ. ಕೋರಮಂಗಲದ 6ನೇ ಬ್ಲಾಕ್ ರಸ್ತೆಯಲ್ಲಿ ಆಕೆಯನ್ನು ತಡೆದು ತನ್ನ ವಿರುದ್ಧವೇ ದೂರು ನೀಡುತ್ತಿಯಾ ಎಂದೆಲ್ಲ ಗಲಾಟೆ ಮಾಡಿದ್ದಾನೆ. ಅದು ವಿಕೋಪಕ್ಕೆ ಹೋದಾಗ, ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಸಾರ್ವಜನಿಕವಾಗಿ ಆಕೆಯ ದೇಹದ ವಿವಿಧ ಭಾಗಗಳಿಗೆ 10ಕ್ಕೂ ಹೆಚ್ಚು ಬಾರಿ ಇರಿದಿದ್ದು, ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದೆ. ವಿಷಯ ತಿಳಿದ ಪೊಲೀಸರು 5-6 ನಿಮಿಷದಲ್ಲೇ ಸ್ಥಳಕ್ಕೆ ತೆರಳಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಗ ಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ.
ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.