ಮಂಡ್ಯ: ಸರ್ವೀಸ್ ರಸ್ತೆ ಪೂರ್ಣಗೊಳಿಸದೇ, ಮೂಲ ಸೌಲಭ್ಯ ಒದಗಿಸದೇ ಬೆಂಗಳೂರು-ಮೈಸೂರು ಹೆದ್ದಾರಿಯ ಗಣಂಗೂರು ಟೋಲ್ ನಲ್ಲಿ ಶುಲ್ಕ ಸಂಗ್ರಹಿಸಬಾರದು ಎಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಯ ಸದಸ್ಯರು ಇಂದು ಬೆಳಿಗ್ಗೆ ಟೋಲ್ ಕೇಂದ್ರದ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ.
ವಿವಿಧ ಕನ್ನಡಪರ ಹಾಗೂ ರೈತ ಪರ ಸಂಘಟನೆಯ ಸದಸ್ಯರು ಪ್ರತಿಭಟನೆ ಆರಂಭಿಸಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು.
ಕೂಡಲೇ ಶುಲ್ಕ ಸಂಗ್ರಹ ನಿಲ್ಲಿಸಬೇಕೆಂದು ಒತ್ತಾಯಿಸಿದರು. ಬಿಗಿಪೊಲೀಸ್ ಬಂದೋ ಬಸ್ತ್ ನಡುವೆ ಟೋಲ್ ಸಂಗ್ರಹ ಮುಂದುವರೆದಿದ್ದು, 50 ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಕೆಲ ತಿಂಗಳ ಹಿಂದೆಯೇ ರಾಮನಗರದ ಕಣಮಿಣಕಿ ಟೋಲ್ ಆರಂಭಿಸಲಾಗಿತ್ತು. ಇದೀಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇನ್ನು ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ವಿಸ್ ರಸ್ತೆಯು ಸರಿಯಾಗಿ ಇಲ್ಲ. ಈಗಾಗಲೇ ಒಂದು ಟೋಲ್ ಗೆ ಕಟ್ಟುತ್ತಿರುವ ಶುಲ್ಕ ಹೊರೆ ಬೀಳುತ್ತಿದೆ. ಇ ನಡುವೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಮತ್ತೊಂದು ಟೋಲ್ ನಲ್ಲಿ ಶುಲ್ಕ ವಸೂಲಿ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.