ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಮೇ 15ರಂದು ಆಯೋಜಿಸಿದ್ದ ರೇವ್ ಪಾರ್ಟಿ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಇತ್ತೀಚೆಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ಹೇಮಾ ಅವರು ಡ್ರಗ್ಸ್ ಸೇವನೆ ಮಾಡಿರುವ ವಿಚಾರ ಖಚಿತ ಆಗಿದೆ
ಬೆಂಗಳೂರಿನಲ್ಲಿ ನಡೆದ ಈ ರೇವ್ ಪಾರ್ಟಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಾಸು ಎಂಬಾತ ಈ ಪಾರ್ಟಿಯನ್ನು ಆಯೋಜನೆ ಮಾಡಿದ್ದ. ಈ ಪಾರ್ಟಿಗೆ ಅನೇಕ ಸೆಲೆಬ್ರಿಟಿಗಳಿಗೆ ಆತ ಆಹ್ವಾನ ನೀಡಿದ್ದ. ಈ ಈವೆಂಟ್ನಲ್ಲಿ ತೆಲುಗು ನಟಿ ಹೇಮಾ ಕೂಡ ಭಾಗಿ ಆಗಿದ್ದರು.
ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿದೆ. ಅವರು ನ್ಯಾಯಾಲಯಕ್ಕೆ 1,086 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ನಟಿ ಹೇಮಾ ಎಂಡಿಎಂಎ ಸೇವಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವರದಿಗಳನ್ನು ಕೂಡ ಲಗತ್ತಿಸಲಾಗಿದೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಇನ್ನೋರ್ವ ನಟಿಗೆ ಡ್ರಗ್ಸ್ ಪರೀಕ್ಷೆ ನೆಗೆಟಿವ್ ಬಂದಿದೆ. ಅವರನ್ನು ಸಾಕ್ಷಿ ಎಂದು ಪರಿಗಣಿಸಲಾಗಿದೆ.
ಪಾರ್ಟಿಯಲ್ಲಿ ಸಿಕ್ಕಿಬಿದ್ದ ಹೇಮಾ ಅವರು ಸಾಕಷ್ಟು ಡ್ರಾಮಾ ಮಾಡಿದ್ದರು. ಅದೇ ರೆಸಾರ್ಟ್ನ ಮತ್ತೊಂದು ಕಡೆಯಲ್ಲಿ ಹೋಗಿ ವಿಡಿಯೋ ಮಾಡಿ, ‘ನಾನು ಡ್ರಗ್ಸ್ ಸೇವಿಸಿಲ್ಲ. ಹೈದರಾಬಾದ್ ಫಾರ್ಮ್‌ಹೌಸ್‌ನಲ್ಲಿ ಇದ್ದೇನೆ’ ಎಂದಿದ್ದರು. ವೈದ್ಯಕೀಯ ವರದಿಯಲ್ಲಿ ಡ್ರಗ್ಸ್ ಸೇವನೆ ಪಾಸಿಟಿವ್ ಎಂದು ತಿಳಿದ ಬಳಿಕ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ದರು. ಪೊಲೀಸರ ಪ್ರಕಾರ ಪಾರ್ಟಿ ಆಯೋಜನೆ ಮಾಡಿದ್ದ ವಾಸು ಹಾಗೂ ಹೇಮಾ ಗೆಳೆಯರಂತೆ.
ಚಾರ್ಜ್ಶೀಟ್ನಲ್ಲಿ ಒಟ್ಟು 88 ಮಂದಿಯನ್ನು ಆರೋಪಿಗಳೆಂದು ಪರಿಗಣಿಸಲಾಗಿದೆ. ವಾಸು ಮತ್ತು ಆತನ ಸ್ನೇಹಿತರು, ಚಿತ್ತೂರು ಜಿಲ್ಲೆಯ ದಂತವೈದ್ಯ ರಣಧೀರ್ ಬಾಬು, ಕೋರಮಂಗಲದ ಅರುಣ್ ಕುಮಾರ್, ಮೊಹಮ್ಮದ್ ಅಬೂಬಕರ್ ಮತ್ತು ನೈಜೀರಿಯಾ ಪ್ರಜೆ ಆಗಸ್ಟಿನ್ ದಾದಾ ಎಂಬುವರು ಪಾರ್ಟಿ ಆಯೋಜಿಸಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪ ಹೊತ್ತಿದ್ದಾರೆ. ಉಳಿದ 79 ಮಂದಿ ಡ್ರಗ್ಸ್ ಸೇವನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಆರೋಪಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 10,000 ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ನ್ಯಾಯಾಲಯದ ವಿವೇಚನೆಯಿಂದ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು. ಪೊಲೀಸರು ಆರೋಪಿಯ ಕರೆ ವಿವರಗಳ ದಾಖಲೆ (ಸಿಡಿಆರ್) ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸ್ಥಳದಲ್ಲಿ ಎಂಡಿಎಂಎ ಮಾತ್ರೆಗಳು, ಎಂಡಿಎಂಎ ಕ್ರಿಸ್ಟಲ್, ಐದು ಗ್ರಾಂ ಕೊಕೇನ್, ಕೊಕೇನ್ ಲೇಪಿತ 500 ರೂಪಾಯಿ ನೋಟು, 6 ಕೆಜಿ ಹೈಡ್ರೋ ಗಾಂಜಾ, 5 ಮೊಬೈಲ್ ಫೋನ್, ಫೋಕ್ಸ್ ವ್ಯಾಗನ್ ಕಾರು, ಲ್ಯಾಂಡ್ ರೋವರ್ ಕಾರು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ವಿವರಿಸಲಾಗಿದೆ.