ಮನೆ ಕಾನೂನು ಬೆಂಗಳೂರು ಗಲಭೆ ಪ್ರಕರಣ; ಯುಎಪಿಎ ಪ್ರಕರಣಗಳಲ್ಲಿ ‘ಜಾಮೀನು ನೀಡುವುದು ನಿಯಮʼ ಎಂಬ ಮಂತ್ರ ಪಠಿಸಲಾಗದು: ಹೈಕೋರ್ಟ್‌

ಬೆಂಗಳೂರು ಗಲಭೆ ಪ್ರಕರಣ; ಯುಎಪಿಎ ಪ್ರಕರಣಗಳಲ್ಲಿ ‘ಜಾಮೀನು ನೀಡುವುದು ನಿಯಮʼ ಎಂಬ ಮಂತ್ರ ಪಠಿಸಲಾಗದು: ಹೈಕೋರ್ಟ್‌

0

ದೇಶದ್ರೋಹದಂತಹ ಗಂಭೀರ ಸ್ವರೂಪದ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಅಪರಾಧ ಪ್ರಕರಣಗಳಲ್ಲಿ ‘ಜಾಮೀನು ನೀಡುವುದು ನಿಯಮ’ (ಬೇಲ್ ಈಸ್‌ ರೂಲ್) ಮಂತ್ರ ಪಠಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

Join Our Whatsapp Group

2020ರಲ್ಲಿ ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಇಮ್ರಾನ್ ಅಹಮದ್ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಪ್ರದೀಪ್ ಸಿಂಗ್ ಯೆರೂರು ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

“ಮೊದಲಿಗೆ ಆರೋಪಿ ಎದುರಿಸುತ್ತಿರುವಂತಹ ಗಂಭೀರ ಅಪರಾಧಗಳ ವಿಚಾರ ಬಂದಾಗ ‘ಜಾಮೀನು ನೀಡುವುದು ನಿಯಮ’ ಎಂಬ ಮಂತ್ರ ಮೈಲು ದೂರು ನಿಲುತ್ತದೆ. ಎರಡನೆಯದಾಗಿ ಈ ಪ್ರಕರಣದಲ್ಲಿ ದೇಶದ್ರೋಹದಂತಹ ಗಂಭೀರ ಸ್ವರೂಪದ ಅಪರಾಧಗಳನ್ನು ಹತ್ತಿಕ್ಕಲು ಸಂಸತ್ ಶಾಸನವನ್ನು ರೂಪಿಸಿರುವುದು ಪರಿಗಣಿಸಬೇಕಾಗುತ್ತದೆ. ಮೂರನೆಯದಾಗಿ ಈ ಪ್ರಕರಣದ ಆರೋಪವನ್ನು ಸಾಬೀತುಪಡಿಸುವ ಹೊಣೆ ಪ್ರಾಸಿಕ್ಯೂಷನ್ ಮೇಲಿದೆ” ಎಂದೂ ನ್ಯಾಯಾಲಯ ಹೇಳಿದೆ.

ಅಲ್ಲದೆ, “ಸಂವಿಧಾನದ ಪ್ರಕಾರ ವೈಯಕ್ತಿಕ ಸ್ವಾತಂತ್ರ್ಯವಿದ್ದರೂ ಸಹ ಸಮಾಜದ ಒಟ್ಟಾರೆ ಹಿತದೃಷ್ಟಿ ಮತ್ತು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಜಾಮೀನು ನೀಡಲಾಗದು” ಎಂದು ಪೀಠ ತಿಳಿಸಿದೆ.

ಪ್ರಕರಣದಲ್ಲಿ ಹಲವು ಆರೋಪಿಗಳ ಜಾಮೀನು ಅರ್ಜಿಗಳನ್ನು ಇತರೆ ಸಹವರ್ತಿ ಪೀಠಗಳು ವಜಾಗೊಳಿಸಿರುವ ಅಂಶವನ್ನು ಉಲ್ಲೇಖಿಸಿರುವ ಪೀಠವು “ಈ ಪ್ರಕರಣದಲ್ಲಿ ಆರೋಪಿಗಳಿಗೆ ತ್ವರಿತ ನ್ಯಾಯ ಕೇಳುವ ಎಲ್ಲಾ ಸಾಂವಿಧಾನಿಕ ಹಕ್ಕು ಇದೆ. ಇದು ತ್ವರಿತ ವಿಚಾರಣೆಗೆ ಹೇಳಿ ಮಾಡಿಸಿದ ಪ್ರಕರಣ. ಸಾಧ್ಯವಾದರೆ ಪ್ರತಿದಿನ ವಿಚಾರಣೆ ನಡೆಸಬೇಕು. ಈ ಕುರಿತು ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಎಷ್ಟು ಹೊರೆಯಾಗುತ್ತದೆಂಬುದೂ ಸಹ ತಿಳಿದಿದೆ” ಎಂದು ಪೀಠ ಹೇಳಿದೆ.

ಸುಪ್ರೀಂ ಕೋರ್ಟ್‌ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಲಯವು ಸಾಂವಿಧಾನಿಕ ಖಾತ್ರಿ ಹಕ್ಕುಗಳಲ್ಲಿ ಮಾನವ ಹಕ್ಕೂ ಸೇರಿದೆ. ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿದರೆ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆ ನಮಗೂ ಅರಿವಿದೆ. ಆತನನ್ನು ಬಿಡುಗಡೆ ಮಾಡುವುದರಿಂದ ನ್ಯಾಯಾಂಗ ಬಂಧನದಲ್ಲಿ ಮುಂದುವರಿಸಿ ನ್ಯಾಯ ಕೊಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

ಎನ್‌ ಐಎ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕಾರದ ಪಿ ಪ್ರಸನ್ನಕುಮಾರ್ ಅವರು “ಇದೊಂದು ಅತ್ಯಂತ ಗಂಭೀರ ಪ್ರಕರಣ. ಇದರಲ್ಲಿ ಯುಎಪಿಎ ಅಡಿ ಪ್ರಕರಣ ದಾಖಲಿಸಿ, ತನಿಖೆಯನ್ನು ಪೂರ್ಣಗೊಳಿಸಿ ಈಗಾಗಲೇ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಪ್ರಕರಣದ ಇತರೆ ಆರೋಪಿಗಳಿಗೂ ಈಗಾಗಲೇ ಜಾಮೀನು ತಿರಿಸ್ಕರಿಸಲಾಗಿದೆ. ಹೀಗಾಗಿ, ಈ ಪ್ರಕರಣದಲ್ಲೂ ಸಹ ತಿರಸ್ಕರಿಸಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: 2020ರಲ್ಲಿ ಬೆಂಗಳೂರಿನ ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಲಭೆ ನಡೆದಿತ್ತು. ದುಷ್ಕರ್ಮಿಗಳು ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದ್ದಲ್ಲದೆ ವ್ಯಾಪಕವಾಗಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿದ್ದರು. ಮೊದಲು ಪೊಲೀಸರು ನಡೆಸುತ್ತಿದ್ದ ತನಿಖೆಯನ್ನು ನಂತರ 2022ರ ಸೆಪ್ಟೆಂಬರ್‌ 20ರಂದು ಎನ್ ಐಎಗೆ ವಹಿಸಲಾಗಿತ್ತು. ಆ ಪ್ರಕರಣದಲ್ಲಿ ಅರ್ಜಿದಾರ 22ನೇ ಆರೋಪಿಯಾಗಿದ್ದು, ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.