ಬೆಂಗಳೂರು: ಕರ್ನಾಟಕದ ಬೆಂಗಳೂರು ಆವಿಷ್ಕಾರಗಳು ಮತ್ತು ಸಾಧನೆಗಳೊಂದಿಗೆ ಆಕಾಂಕ್ಷೆಗಳನ್ನು ಸಂಪರ್ಕಿಸುವ ನಗರ. ಬೆಂಗಳೂರು ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಬೇಡಿಕೆಯೊಂದಿಗೆ ಬೆಸೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಏರೊಸ್ಪೇಸ್ ಪಾರ್ಕ್ ನಲ್ಲಿ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ವಾಸಿಗಳಿಗೆ ಇಂದು ಮಹತ್ವದ ದಿನ. ಈ ಹಿಂದೆ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕೆ ಕಾರ್ಖಾನೆ ಆರಂಭವಾಗಿತ್ತು. ಈಗ ಜಾಗತಿಕ ತಂತ್ರಜ್ಞಾನ ಕ್ಯಾಂಪಸ್ ಸಹ ಲಭ್ಯವಾಗುತ್ತಿದೆ. ಇದು ಕರ್ನಾಟಕ ಅತಿದೊಡ್ಡ ಏವಿಯೇಶನ್ ಹಬ್ ಆಗಿ ವಿಕಸಿತವಾಗುತ್ತಿದೆ ಎಂದು ತೋರಿಸುತ್ತದೆ ಎಂದು ಬಣ್ಣಿಸಿದರು.
ಬೋಯಿಂಗ್ ನ ಈ ಹೊಸ ಜಾಗತಿಕ ತಂತ್ರಜ್ಞಾನ ಕ್ಯಾಂಪಸ್ ಬೆಂಗಳೂರಿನ ಗುರುತನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಕ್ಯಾಂಪಸ್ ಜಾಗತಿಕ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ, ವಿನ್ಯಾಸ ಮತ್ತು ಬೇಡಿಕೆಯನ್ನು ಹೆಚ್ಚಿಸಲು ಭಾರತದ ಬದ್ಧತೆಯನ್ನು ತೋರಿಸುತ್ತದೆ. ಅಲ್ಲದೇ, ಇನ್ ಇಂಡಿಯಾ ಮೇಕ್ ಪರಿಕಲ್ಪನೆಯನ್ನು ಮೇಕ್ ಫಾರ್ ದಿ ವರ್ಲ್ಡ್ ಎಂಬ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.