ಬೆಳಗಾವಿ: ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣದ ಆರೋಪಿಗಳಿಗೆ ಇಂದು ಕೋಕಾ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಾರ್ಚ್ 30ರಂದು ಪ್ರಕರಣದಲ್ಲಿ 9 ಮಂದಿ ದೋಷಿಗಳು ಎಂದು ನ್ಯಾಯಾಧೀಶ ಸಿ.ಎಂ.ಜೋಶಿ ತೀರ್ಪು ಪ್ರಕಟಿಸಿದ್ದರು.
ಘಟನೆ ವಿವರ: 3 ಕೋಟಿ ರೂಪಾಯಿ ಹಫ್ತಾ ನೀಡದಿದ್ದಕ್ಕೆ 2013 ಡಿಸೆಂಬರ್ 21ರಂದು ಅಂಕೋಲಾದಲ್ಲಿ ಆರ್.ಎನ್.ನಾಯಕ್ ಅವರನ್ನು ಸುಪಾರಿ ನೀಡಿ ಹತ್ಯೆ ಮಾಡಲಾಗಿತ್ತು. ಆರೋಪಿಗಳ ವಿರುದ್ಧ ಪೊಲೀಸರು ಕೋಕಾ ಅಡಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದರು. ಇದು ರಾಜ್ಯದ ಮೊದಲ ಕೋಕಾ ಪ್ರಕರಣವಾಗಿತ್ತು. ಈ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಪ್ರಕರಣದ ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ ಸೇರಿದಂತೆ ಒಂಬತ್ತನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.