ಮನೆ ಅಪರಾಧ ಬಂಟ್ವಾಳ ಉದ್ಯಮಿ ಮನೆಗೆ ಇ.ಡಿ ಸೋಗಿನಲ್ಲಿ ಬಂದು ದರೋಡೆ ಪ್ರಕರಣ: ಕೇರಳ ಎಎಸ್ಐ ಬಂಧನ

ಬಂಟ್ವಾಳ ಉದ್ಯಮಿ ಮನೆಗೆ ಇ.ಡಿ ಸೋಗಿನಲ್ಲಿ ಬಂದು ದರೋಡೆ ಪ್ರಕರಣ: ಕೇರಳ ಎಎಸ್ಐ ಬಂಧನ

0

ಬಂಟ್ವಾಳ (ದಕ್ಷಿಣ ಕನ್ನಡ) : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರ ಮನೆಗೆ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 30 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೊಡಂಗಲ್ಲೂರು ಪೊಲೀಸ್‌ ಠಾಣೆ ಎಎಸ್​ಐ ಸೇರಿದಂತೆ ಇನ್ನೂ ನಾಲ್ಕು ಮಂದಿ ಆರೋಪಿಗಳನ್ನು ವಿಟ್ಲ ಪೊಲೀಸ್​ ಠಾಣೆ ವಿಶೇಷ ತನಿಖಾ ತಂಡ ಬಂಧಿಸಿದೆ ಎಂದು ಎಸ್​ಪಿ ಯತೀಶ್​ ಎನ್.​ ತಿಳಿಸಿದ್ದಾರೆ.

Join Our Whatsapp Group

ಕೊಡಂಗಲ್ಲೂರು ಪೊಲೀಸ್‌ ಠಾಣೆ ಎಎಸ್​ಐ ಶಫೀರ್​ ಬಾಬು (48), ಮನೆಯ ಮಾಹಿತಿ ನೀಡಿದ್ದ ಸ್ಥಳೀಯ ಆರೋಪಿ ಕೊಳ್ನಾಡು ನಿವಾಸಿ ಸಿರಾಜಿದ್ದೀನ್​ (37), ಬಂಟ್ವಾಳ ನಿವಾಸಿ ಮೊಹಮ್ಮದ್​ ಇಕ್ಬಾಲ್​ (38) ಹಾಗೂ ಮಂಗಳೂರು ಪಡೀಲ್​ ನಿವಾಸಿ ಮೊಹಮ್ಮದ್​ ಅನ್ಸಾರ್ (27)​ ಎಂಬವರು ಇದೀಗ ಬಂಧಿತ ನಾಲ್ವರು ಆರೋಪಿಗಳಾಗಿದ್ದಾರೆ.

ತನಿಖಾ ತಂಡವು ಈಗಾಗಲೇ ಕೇರಳ ಕೊಲ್ಲಂ ನಿವಾಸಿಗಳಾದ ಅನಿಲ್​ ಫರ್ನಾಂಡೀಸ್ (49), ಸಚ್ಚಿನ್​ ಟಿ.ಎಸ್. (29), ಹಾಗೂ ಶಬಿನ್​ ಎಸ್​. (27) ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದೆ.​ ಪ್ರಕರಣ ಸಂಬಂಧ ಈವರೆಗೆ ಎಲ್ಲ 7 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ದರೋಡೆ ಕೃತ್ಯದ ಸೂತ್ರದಾರ ಕೇರಳದ ಎಎಸ್​ಐ ಶಫೀರ್ ಎಂದು ತಿಳಿದು ಬಂದಿದೆ. ತ್ರಿಶೂರ್ ಜಿಲ್ಲಾ ಎಸ್​ಪಿಯ ಅನುಮತಿಯೊಂದಿಗೆ ಶನಿವಾರ ಮಧ್ಯಾಹ್ನ ಪೊಲೀಸ್ ಕ್ವಾರ್ಟರ್ಸ್​ ನಿಂದ ಆರೋಪಿ ಶಫೀರ್​ ಬಾಬುನನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಟ್ಲ ಪೊಲೀಸ್ ಠಾಣೆಗೆ ಕರೆದು ತರಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ ಶನಿವಾರ ಕೃತ್ಯಕ್ಕೆ ಮನೆಯ ಮಾಹಿತಿ ನೀಡಿದ್ದ ಸ್ಥಳೀಯ ಆರೋಪಿ ಕೊಳ್ನಾಡು ನಿವಾಸಿ ಸಿರಾಜುದ್ದೀನ್​ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಆತ ನೀಡಿದ ಮಾಹಿತಿಯ ಆಧಾರದಲ್ಲಿ ಮೊಹಮ್ಮದ್​ ಇಕ್ಬಾಲ್​ ಹಾಗೂ ಮೊಹಮ್ಮದ್​ ಅನ್ಸಾರ್​ ಎಂಬವರನ್ನು ಬಂಧಿಸಲಾಯಿತು. ಆ ಬಳಿಕ, ಕೇರಳದ ಎಎಸ್​ಐ ಶಫೀರ್​ ಬಾಬುನನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಎಸ್​ಪಿ ಯತೀಶ್​ ಎನ್​. ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ವ್ಯಾಪ್ತಿಯು ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಅಧಿಕಾರಿ ಹಾಗೂ ಸಿಬ್ಬಂದಿಯ ನಾಲ್ಕು ತಂಡಗಳು ತನಿಖೆಯಲ್ಲಿ ಕಾರ್ಯಾಚರಣೆ ನಡೆಸಿವೆ.