ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಹಲವೆಡೆ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ದಾಳಿ ನಡೆಸಿದೆ.
ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ನಂದಾವರದಲ್ಲಿ ನಾಲ್ವರು ಯುವಕರನ್ನು ವಶಕ್ಕೆ ಪಡೆದ ಎನ್ಐಎ ಅಧಿಕಾರಿಗಳ ತಂಡ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದೆ. ಆ ಯುವಕರ ಖಾತೆಯಿಂದ ಸಂಶಯಾಸ್ಪದ ರೀತಿಯಲ್ಲಿ ಹಣ ವರ್ಗಾವಣೆ ಆಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಣೆಮಂಗಳೂರಿನ ಮತ್ತು ಮೆಲ್ಕಾರ್ ನ ಸೈಬರ್ ಸೆಂಟರ್ ಗಳಿಗೂ ಎನ್’ಐಎ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಕಲೆ ಹಾಕಿದ್ದಾರೆ ಎಂದು ಗೊತ್ತಾಗಿದೆ.
ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪಿಗಳಿಗೆ ನೆರವಾದವರ ಪತ್ತೆ ಸಲುವಾಗಿ ದಾಳಿ ನಡೆಸಿದೆ ಎನ್ನಲಾಗಿದ್ದು, ನಿರ್ದಿಷ್ಟವಾಗಿ ಯಾವ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಲಾಗಿದೆ ಎಂಬುದನ್ನು ಎನ್ಐಎ ಇನ್ನೂ ಬಹಿರಂಗಪಡಿಸಿಲ್ಲ.