ದಕ್ಷಿಣ ಕನ್ನಡ : ಕಳೆದೆರಡು ದಿನಗಳಿಂದ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾದ ಅಬ್ದುಲ್ ರಹೀಂ ಅವರ ಬರ್ಬರ ಕೊಲೆ ಪ್ರಕರಣಕ್ಕೆ ಇದೀಗ ತೀವ್ರ ಪ್ರಗತಿ ಕಂಡಿದೆ. ಈ ದುಃಖದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಬಂಟ್ವಾಳದ ದೀಪಕ್ (21), ಪೃಥ್ವಿರಾಜ್ (21), ಮತ್ತು ಚಿಂತನ್ (19) ಎಂಬವರು ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಎಂದು ಗುರುತಿಸಲ್ಪಟ್ಟಿದ್ದು, ಇವರನ್ನು ಕಳ್ಳಿಗೆ ಗ್ರಾಮದ ಕನಪಾಡಿ ಪ್ರದೇಶದಲ್ಲಿ ಪೊಲೀಸರು ತೀವ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಅಬ್ದುಲ್ ರಹೀಂನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ನಂತರ ಪರಾರಿಯಾಗಿದ್ದರು.
ಕೊಲೆ ನಡೆದ ದಿನದಿಂದಲೇ ಆರೋಪಿಗಳ ಪತ್ತೆಗೆ ಪೊಲೀಸರು ಭಾರಿ ಬಲೆ ಬೀಸಿದ್ದರು. ಸ್ಥಳೀಯ ಗುಪ್ತಚರ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಚಲನವಲನವನ್ನು ಗುರುತಿಸಿ, ಬಂಟ್ವಾಳ ಉಪ ವಿಭಾಗದ ಪೊಲೀಸರ ತಂಡ ಇಂದು ದಾಳಿ ನಡೆಸಿ ಮೂವರನ್ನು ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವ ಸಾಧ್ಯತೆ ಇದೆ. ಪೊಲೀಸರು ಇನ್ನಷ್ಟು ಮಾಹಿತಿ ಬಯಲಿಗೆಳೆಯಲು ತನಿಖೆ ಮುಂದುವರೆಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಸಂಬಂಧಿತರಿರುವ ಶಂಕೆಯಿದ್ದು, ಜಾಲವಿಸ್ತಾರಗೊಳ್ಳುವ ಸಾಧ್ಯತೆ ಹೊಂದಿದೆ.















