ಮನೆ ರಾಜ್ಯ ಸಕಾಲಕ್ಕೆ ಚಿಕಿತ್ಸೆ ಸಿಗದಿದ್ದಕ್ಕೆ ಬಾಣಂತಿ ಸಾವು: ಸಂಬಂಧಿಕರ ಆರೋಪ

ಸಕಾಲಕ್ಕೆ ಚಿಕಿತ್ಸೆ ಸಿಗದಿದ್ದಕ್ಕೆ ಬಾಣಂತಿ ಸಾವು: ಸಂಬಂಧಿಕರ ಆರೋಪ

0

ಬಂಗಾರಪೇಟೆ: ಹೆರಿಗೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದ ಮಹಿಳೆಗೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣದಿಂದಾಗಿ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಪಟ್ಟಣದ ಶಾಂತಿನಗರ ನಿವಾಸಿ ಮಂಜುನಾಥ ಅವರ ಪತ್ನಿ ಭಾರತಿ (28) ಮೃತರು.

ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ ಶಸ್ತ್ರಚಿಕಿತ್ಸೆ ಆಗಿದ್ದು, ಹೆಣ್ಣುಮಗುವಾಗಿದೆ. ಮಹಿಳೆಗೆ ರಾತ್ರಿ ತೀವ್ರ ಕಾಲು ನೋವು ಉಂಟಾಗಿದೆ. ಚಿಕಿತ್ಸೆ ನೀಡಿದ ನಂತರವೂ ನೋವು ಕಡಿಮೆ ಆಗದ ಕಾರಣ ಕೋಲಾರ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಮಾರ್ಗಮಧ್ಯದಲ್ಲಿ ಬಾಣಂತಿ ಮೃತಪಟ್ಟಿದ್ದಾರೆ.

ಈ ಸಂಬಂಧ ಮಾತನಾಡಿದ ಮಹಿಳೆ ಪತಿ ಮಂಜುನಾಥ, ಚುಚ್ಚುಮದ್ದು ತರಲು ನರ್ಸ್ ಹೇಳಿದರು. ಚುಚ್ಚುಮದ್ದು ನೀಡಿದರೂ ನೋವು ಕಡಿಮೆಯಾಗಲಿಲ್ಲ. ಆಗ ವೈದ್ಯರು ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು ಎಂದು ಹೇಳಿದರು.

ಪತ್ನಿಗೆ ಸಕಾಲದಲ್ಲಿ ಚಿಕಿತ್ಸೆ ಕೊಟ್ಟಿಲ್ಲ. ಸ್ಟ್ರೆಚರ್ ತಳ್ಳುವವರಿಗೆ  300, ವೈದ್ಯರಿಗೆ 3 ಸಾವಿರ, ನರ್ಸ್‌ ಗೆ  500 ಲಂಚ ಕೊಟ್ಟಿರುವೆ. ಆದರೂ ಪತ್ನಿ ಬದುಕಿಲ್ಲ ಎಂದು  ಕಣ್ಣೀರು ಹಾಕಿದರು

ಕುಟುಂಬಸ್ಥರು, ವಿವಿಧ ಸಂಘಟನೆಗಳವರು ಆಸ್ಪತ್ರೆ ಬಳಿ ಪ್ರತಿಭಟಿಸಿದ್ದಾರೆ.