ಬರ್ಕಣ ಜಲಪಾತ ಪಶ್ಚಿಮ ಘಟ್ಟದ ಗುಪ್ತ ರತ್ನವಾಗಿದೆ. ಆಗುಂಬೆ ಸಮೀಪ ಸೀತಾ ನದಿ ದಟ್ಟ ಕಾನನದ ನಡುಮೆ 260 ಮೀಟರ್ ಎತ್ತರದಿಂದ ಧುಮುಕಿ ಬರ್ಕಣ ಜಲಪಾತವು ರೂಪುಗೊಳ್ಳುತ್ತದೆ. ಹಾಲಿನಂತ ಬಣ್ಣ, ಸುತ್ತಲೂ ನಿತ್ಯಹರಿದ್ವರ್ಣ ಕಾಡುಗಳು, ಕಾಡಿನ ಮಧ್ಯೆ ಚಾರಣ, ಕಣಿವೆಯ ವಿಶಾಲ ನೋಟ ಇವು ಬರ್ಕಣ ಜಲಪಾತಕ್ಕೆ ನೀಡುವ ಭೇಟಿಯನ್ನು ಸ್ಮರಣೀಯ ಅನುಭವವನ್ನಾಗಿ ಮಾಡುತ್ತವೆ.
ಪಶ್ಚಿಮ ಘಟ್ಟದ ಬರ್ಕಣ ಕಣಿವೆಯ ವಿಹಂಗಮ ನೋಟವನ್ನು ಬರ್ಕಣ ಜಲಪಾತಕ್ಕೆ ಹೋಗುವ ದಾರಿಯಲ್ಲಿ ನೋಡಬಹುದಾಗಿದೆ. ಕಾಡಿನ ಮಧ್ಯೆ ಚಾರಣ ಮಾಡುವಾಗ ಸಾಕಷ್ಟು ಆಸಕ್ತಿದಾಯಕ ಸಸ್ಯ ಪ್ರಭೇದಗಳು, ಕಪ್ಪೆಗಳು, ಹಾವುಗಳು ಮತ್ತು ಕೀಟಗಳು ಕಾಣಸಿಗುವ ಸಾಧ್ಯತೆಗಳಿವೆ.
ಭೇಟಿ ನೀಡಲು ಸೂಕ್ತ ಸಮಯ: ಸೆಪ್ಟೆಂಬರ್ ಮತ್ತು ಡಿಸೆಂಬರ್ / ಜನವರಿ ನಡುವೆ ಬರ್ಕಣ ಜಲಪಾತ ಭೇಟಿ ಉತ್ತಮ. ಮಳೆಗಾಲದಲ್ಲಿ ಮಾರ್ಗವು ಇಂಬಳಗಳಿಂದ ತುಂಬಿದ್ದು, ವಿಪರೀತ ಮಳೆ, ಜಾರುವ ಬಂಡೆಗಳು ಮತ್ತಿತರ ಕಾರಣಗಳಿಂದಾಗಿ ಅಸುರಕ್ಷಿತವಾಗಿದೆ. ಬೇಸಿಗೆ ಸಮೀಪಿಸುತ್ತಿದ್ದಂತೆ ಬರ್ಕಣ ಜಲಪಾತವು ಒಣಗಬಹುದು ಮತ್ತು ಕಡಿಮೆ ಆಕರ್ಷಕವಾಗಿರುತ್ತದೆ.
ಹತ್ತಿರದಲ್ಲಿ ಇನ್ನೇನಿದೆ: ಕುಂದಾದ್ರಿ ಬೆಟ್ಟಗಳು (24 ಕಿ.ಮೀ), ಶೃಂಗೇರಿ (36 ಕಿ.ಮೀ), ಸಿರಿಮನೆ ಜಲಪಾತ (48 ಕಿ.ಮೀ), ಕವಲೆದುರ್ಗ (45 ಕಿ.ಮೀ) ಮತ್ತು ವರಂಗ ಸರೋವರ ಬಸದಿ (32 ಕಿ.ಮೀ) ಗಳನ್ನೂ ಬರ್ಕಣ ಜಲಪಾತದೊಂದಿಗೆ ಭೇಟಿ ಕೊಡಬಹುದಾಗಿದೆ.
ತಲುಪುವುದು ಹೇಗೆ: ಬರ್ಕಣ ಜಲಪಾತ ಬೆಂಗಳೂರಿನಿಂದ 353 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 100 ಕಿ.ಮೀ ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣ (100 ಕಿ.ಮೀ ದೂರದಲ್ಲಿದೆ). ಉಡುಪಿ ಹತ್ತಿರದ ರೈಲು ನಿಲ್ದಾಣ (53 ಕಿ.ಮೀ). ಅಗುಂಬೆ ತನಕ ಬಸ್ಸುಗಳು ಲಭ್ಯವಿದೆ. ಬರ್ಕಣ ಜಲಪಾತವು ಅಗುಂಬೆಯಿಂದ 7 ಕಿ.ಮೀ ದೂರದಲ್ಲಿದೆ. ಕೆಲವು ಬಸ್ಸುಗಳು / ಆಟೋ / ಸ್ವಂತ ವಾಹನ ಬಳಸಿ ಸ್ವಲ್ಪ ದೂರ ಹೋಗಬಹುದಾದರೂ ಕೊನೆಯ ಕೆಲವು ಕಿ.ಮೀ.ಗಳನ್ನು ಕಾಲ್ನಡಿಗೆಯಲ್ಲಿ ಸಾಗಬೇಕಾಗುತ್ತದೆ.
ವಸತಿ: ಅಗುಂಬೆಯಲ್ಲಿ ಕೆಲವು ಗೃಹ ವಸತಿ (ಹೋಂ ಸ್ಟೇ) ಆಯ್ಕೆಗಳಿವೆ. ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳು ನಿರ್ವಹಿಸುತ್ತಿರುವ ಸೀತಾನದಿ ಪ್ರಕೃತಿ ಶಿಬಿರವು 22 ಕಿ.ಮೀ ದೂರದಲ್ಲಿದೆ. ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ತೀರ್ಥಹಳ್ಳಿ (40 ಕಿ.ಮೀ) ಮತ್ತು ಹೆಬ್ರಿ (26 ಕಿ.ಮೀ) ಯಲ್ಲಿ ಲಭ್ಯವಿದೆ.