ಪ್ರತಿಮನೆಯಂಗಳದಲ್ಲಿಯೂ ಸಾಮಾನ್ಯವಾಗಿ ಕಾಣಸಿಗುವ ತುಳಸಿ ಪವಿತ್ರತೆಗೆ ಹೆಸರಾಗಿದ್ದು ಪೂಜಿಸಲ್ಪಡುತ್ತದೆ. ಸಂಸ್ಕೃತದಲ್ಲಿ ತುಲಸಿ, ಸುರಸಾ, ಗ್ರಾಮ್ಯ, ಸುಲಭಾ, ಗೌರಿ, ಬಹುಮಂಜರಿ, ಶೂಲಘ್ನಿ, ದೇವದುಂದುಭಿ, ಪಾವನಿ, ವಿಷ್ಣುಪ್ರಿಯೆ, ದಿವ್ಯ, ಭಾರತಿ ಮುಂತಾದ ಅನೇಕ ಪರ್ಯಾಯ ಪದಗಳಿಂದ ಕರೆಯಲ್ಪಡುವ ತುಳಸಿ ‘ಸರ್ವರೋಗ ನಿವಾರಕ’ ಎಂಬ ಬಿರುದನ್ನು ಪಡೆದುಕೊಂಡಿದೆ. ತುಳಸಿಯು ರುಚಿಯಲ್ಲಿ ಕಹಿಯಾಗಿದ್ದು ಅಗ್ನಿ ಪ್ರದೀಪಕ ಹೃದಯಕ್ಕೆ ಹಿತಕರ, ಉಷ್ಣ, ಪಿತ್ತವನ್ನು ಹೆಚ್ಚಿಸುವಂತಹುದಾಗಿದೆ.
ತುಳಸಿಯು ಪರಿಶುದ್ಧವಾದ ಸುಗಂಧ ದ್ರವ್ಯಸಸ್ಯವಾಗಿದ್ದು ತನ್ನ ಗ್ರಹಣಶಕ್ತಿಯಿಂದ ಸುತ್ತಮುತ್ತಲಿನ ಗಾಳಿಯನ್ನು ಪರಿಶುದ್ಧಗೊಳಿಸುತ್ತದೆ. ಸೂರ್ಯೋದಯಕ್ಕಿಂತ ಮುಂಚೆ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆ ಫಲಕಾರಿಯಾಗಿದೆ. ಪ್ರಾಯಶಃ ಯಮದೂತನೂ ಸಹ ಈ ಪವಿತ್ರವಾದ ಗಿಡಕ್ಕೆ ದಾರಿ ಬಿಡುತ್ತಾನೆ ಎಂದು ಹಿಂದೂ ಪುರಾಣಕತೆ ಹೇಳುತ್ತದೆ. ಪ್ರತಿವರ್ಷವೂ ಶರತ್ಕಾಲದ ಚಂದ್ರನು ಕಳೆಯೇರುವಾಗ, ತುಳಸಿ ಧಾರ್ಮಿಕ ಸಂಸ್ಕಾರದಿಂದ ಹಿಂದೂ ತ್ರಿತಯರಲ್ಲಿ ಒಬ್ಬನಾದ ವಿಷ್ಣುವನ್ನು ಮದುವೆ ಯಾಗುತ್ತಾಳೆ ಭಾರತೀಯ ಮನೆಗಳ ಅಂಗಳದಲ್ಲಿ ಇರುವ ತುಳಸಿಯನ್ನು ಶಾಂತಿ, ಧರ್ಮಶ್ರದ್ದೆ ಮತ್ತು ಸದ್ಗುಣವಿರುವ ಸ್ಥಳ ಎಂದು ತಿಳಿಯುತ್ತಾರೆ. ಈ ಗಿಡದ ಬೇರುಗಳು ದೈವಭಕ್ತಿಯ ಯಾತ್ರಾಸ್ಥಳ, ಕೊಂಬೆಗಳು ದೈವತ್ವ, ಮುಡಿಯು ಪವಿತ್ರ ಗ್ರಂಥವೆಂದು ಸಾಂಕೇತಿಕವಾಗಿದೆ.
ಇದು ದ್ವೈವಾರ್ಷಿಕ ಅಥವಾ ತೈವಾರ್ಷಿಕ ಹೊದರಾಗಿದ್ದು, ಮನೆಗಳಲ್ಲಿ, ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಸಸ್ಯವನ್ನು ಸಾಧಾರಣವಾಗಿ ದೇವಾಲಯಗಳ ಆವರಣದಲ್ಲಿ ಬೆಳೆಯುತ್ತಾರೆ.
ವಿಧಗಳು
ತುಳಸಿಯಲ್ಲಿ ಶ್ರೀತುಳಸಿ ಮತ್ತು ಕೃಷ್ಣತುಳಸಿ ಎಂಬ ಎರಡು ವಿಧಗಳಿವೆ. ಈ ಎರಡೂ ವಿಧಗಳು ಔಷಧಿಯಲ್ಲಿ ಸಮಾನಗುಣ ಹೊಂದಿವೆ.
ಸಸ್ಯವರ್ಣನೆ
ತುಳಸಿ (ಆಸಿಮಮ್ ಸ್ಯಾಂಕ್ಷಮ್) ಯು ಲ್ಯಾಮಿಯೇಸೀ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದು ನೇರವಾಗಿ ಬೆಳೆಯುವ, ಎಲೆಗಳಿಂದ ಕೂಡಿದ, ಹೆಚ್ಚಿನ ಕವಲುಗಳುಳ್ಳ, ಮೃದುವಾದ ತುಪ್ಪಳ ಹೊಂದಿದ ದೈವಾರ್ಷಿಕ ಸಸ್ಯ ಪೂರ್ಣ ಬೆಳೆದಾಗ ಗಿಡಗಳು 30-75 ಸೆಂ.ಮೀ. ಎತ್ತರಕ್ಕೆ ಬೆಳೆಯುತ್ತವೆ. ಎಲೆಗಳು ಮೊಂಡಾಗಿದ್ದು, ಸಣ್ಣ ಗ್ರಂಥಿಗಳನ್ನು ಹೊಂದಿರುತ್ತವೆ. ಎಲೆಗಳು ನೇರಳೆ ಬಣ್ಣ ಅಥವಾ ಕುಂಕುಮ ಬಣ್ಣವಿದ್ದು ಅವುಗಳ ಅಂಚಿನಲ್ಲಿ ಚಿಕ್ಕಕಪ್ಪು ಗುರುತುಗಳಿರುತ್ತವೆ.
ಉಗಮ ಮತ್ತು ಹಂಚಿಕೆ
ತುಳಿಸಿಯು ಭಾರತದ ಉಪಖಂಡದಾದ್ಯಂತ ಹಬ್ಬಿದ್ದು ಹಿಮಾಲಯದಲ್ಲಿ 1800 ಮೀ. ಎತ್ತರದವರೆಗಿನ ಪ್ರದೇಶಗಳಲ್ಲೂ ಕಂಡುಬರುತ್ತದೆ. ಅಲ್ಲದೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿಯೂ ಕಾಣಸಿಗುತ್ತದೆ. ಈ ಸಸ್ಯವು ಭಾರತದಾದ್ಯಂತ ಸಹಜವಾಗಿ ಹುಟ್ಟಿ ಬೆಳೆಯಬಲ್ಲದು.
ಬಗೆ ಮತ್ತು ತಳಿಗಳು
ಭಾರತದಲ್ಲಿ ಆ.ಸ್ಯಾಂಕ್ಷಮ್ ಪ್ರಭೇದದಲ್ಲಿ ಎರಡು ಬಗೆಗಳು ಕಾಣಬರುತ್ತವೆ. ಅವುಗಳೆಂದರೆ ಹಸಿರು ಬಗೆ (ಶ್ರೀತುಳಸಿ) ಇದನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ ಮತ್ತು ಎರಡನೆಯ ಬಗೆ (ಕೃಷ್ಣತುಳಸಿ) ಯು ನೇರಳೆ ಬಣ್ಣದ ಎಲೆಗಳನ್ನು ಹೊಂದಿರುತ್ತವೆ. ಇದು ಔಷಧೀಯವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ.
ಮಣ್ಣು
ವೈವಿಧ್ಯಮಯ ಗುಣಧರ್ಮವುಳ್ಳ ಮಣ್ಣುಗಳಲ್ಲಿ ಈ ಬೆಳೆಯನ್ನು ಬೆಳೆಯಬಹುದು. ಜೇಡಿಮಣ್ಣಿನಿಂದ, ಜಂಬಿಟ್ಟಿಗೆ, ಲವಣಯುಕ್ತ ಮತ್ತು ಕ್ಷಾರಯುಕ್ತದಿಂದ ಕೂಡಿದ ಮಧ್ಯಮ ಆಮ್ಲತೆಯುಳ್ಳ ಮಣ್ಣುಗಳೂ ಇದರ ಬೇಸಾಯಕ್ಕೆ ಸೂಕ್ತ ನೀರು ಚೆನ್ನಾಗಿ ಬಸಿದು ಹೋಗುವ ಮಣ್ಣು ಬೆಳವಣಿಗೆಗೆ ಉತ್ತೇಜನ ನೀಡುತ್ತವೆ. ನೀರು ನಿಲ್ಲುವ ಸ್ಥಳಗಳಲ್ಲಿ ಗಿಡಗಳ ಬೇರು ಕೊಳೆತು ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ.
ಹವಾಗುಣ
ಇದನ್ನು ಸ್ವಲ್ಪ ನೆರಳಿರುವ ಜಾಗಗಳಲ್ಲಿಯೂ ಸಹ ಬೆಳೆಯಬಹುದು. ಹಗಲಿನಲ್ಲಿ ಹೆಚ್ಚಿನ ಉಷ್ಣಾಂಶವಿದ್ದರೆ ಸಸ್ಯದ ಬೆಳವಣಿಗೆಗೆ ಮತ್ತು ತೈಲದ ಉತ್ಪಾದನೆಗೆ ಒಳ್ಳೆಯದು. ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಪ್ರದೇಶಗಳು (900 ಮೀ. ಎತ್ತರದವರೆಗಿನ ಪ್ರದೇಶ) ಇದರ ಬೇಸಾಯಕ್ಕೆ ಯೋಗ್ಯ. ಈ ಸಸ್ಯವು ಸ್ವಲ್ಪಮಟ್ಟಿಗೆ ಬರ ಮತ್ತು ಹಿಮವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಬೇಸಾಯ ಕ್ರಮಗಳು
ಈ ಬೆಳೆಗೆ ವಾಣಿಜ್ಯವಾಗಿ ಬೇಡಿಕೆಯಿರುವುದರಿಂದ ಅನೇಕ ಕೃಷಿಕರು ಒಪ್ಪಂದ ಕೃಷಿಯಲ್ಲಿ ಬೇಸಾಯ ಮಾಡುತ್ತಿದ್ದಾರೆ.
ಸಸ್ಯಾಭಿವೃದ್ಧಿ : ತುಳಸಿಯನ್ನು ಬೀಜಗಳಿಂದ ವೃದ್ಧಿಸಲಾಗುತ್ತದೆ. ಇದು ಪರಕೀಯ ಪರಾಗಸ್ಪರ್ಶ ಹೊಂದುವ ಸಸ್ಯವಾದ ಪ್ರಯುಕ್ತ ಸಂತತಿಯಲ್ಲಿ ಹೆಚ್ಚಿನ ಭಿನ್ನತೆ ಕಂಡುಬರುತ್ತದೆ. ಆದಕಾರಣ ಹೊಸದಾಗಿ ಸಸಿಗಳನ್ನು ವೃದ್ಧಿಮಾಡಲು ಹೊಸ ಬೀಜಗಳನ್ನು ಉತ್ತಮ ಪೀಳಿಗೆಯ ಸಂತತಿಗಳಿಂದ ಆಯ್ಕೆ ಮಾಡಿಕೊಳ್ಳಬೇಕು.
ಕಾಲ : ಸಸಿ ಮಡಿಗಳನ್ನು ಫೆಬ್ರವರಿ ಮೂರನೇ ವಾರದಲ್ಲಿ ತಯಾರಿಸಿ, ನಾಟಿಯನ್ನು
ಸಾಮಾನ್ಯವಾಗಿ ಏಪ್ರಿಲ್ ಮಧ್ಯಭಾಗದಲ್ಲಿ ಮಾಡಬೇಕು. ಸಸಿಗಳನ್ನು ಉಷ್ಣತೆಯುಳ್ಳ ಸಸಿ ಮಡಿಗಳಲ್ಲಿ ಬೆಳೆಸಲಾಗಿದ್ದಲ್ಲಿ ಅವುಗಳನ್ನು ಮಾರ್ಚ್ ತಿಂಗಳಿನಲ್ಲಿಯೇ ನಾಟಿ ಮಾಡಬೇಕು.
ಸಸಿಮಡಿ : ಬೀಜಗಳನ್ನು ಬಿತ್ತನೆ ಮಾಡಲು 1 ಮೀ. X 1 ಮೀ. ಅಳತೆಯ ಸಸಿಮಡಿಯನ್ನು ಸಿದ್ದಪಡಿಸಿಕೊಳ್ಳಬೇಕು. ಕೊಟ್ಟಿಗೆ ಗೊಬ್ಬರವನ್ನು ಪ್ರತೀ ಸಸಿಮಡಿಗೆ ಒದಗಿಸಬೇಕು. ಬೀಜಗಳನ್ನು 2 ಸೆಂ.ಮೀ. ಆಳಕ್ಕೆ ಬಿತ್ತನೆ ಮಾಡಬೇಕು. ಬಿತ್ತನೆ ಮಾಡಿದ ನಂತರ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣಿನ ಮಿಶ್ರಣವನ್ನು ಸಸಿಮಡಿಗಳ ಮೇಲೆ ತೆಳುವಾಗಿ ಹರಡಿ, ನೀರನ್ನು ತುಂತರಾಗಿ ಬೀಳುವಂತೆ ಕೊಡಬೇಕು. ಬೀಜಗಳ ಬಿತ್ತನೆಯಾದ 8-12 ದಿನಗಳಲ್ಲಿ ಮೊಳೆತು, 6 ವಾರಗಳಲ್ಲಿ ನಾಟಿಗೆ ಸಿದ್ಧವಾಗುತ್ತವೆ.
ಭೂಮಿ ಸಿದ್ದತೆ : ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ನೀರನ್ನು ಹಾಯಿಸಲು ಅನುಕೂಲಕ್ಕೆ ತಕ್ಕಂತೆ ತಾಕುಗಳನ್ನು ವಿಂಗಡಿಸಿಕೊಳ್ಳಬೇಕು. ಒಂದು ಚದರ ಮೀಟರ್ 5 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಉಳುಮೆ ಸಮಯದಲ್ಲಿ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು.
ಸಸಿಗಳನ್ನು ನಾಟಿ ಮಾಡುವುದು : ಸಸಿಗಳನ್ನು ಕ್ರಮವಾಗಿ 45 X 45 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಿದ ತಕ್ಷಣ ಬೆಳೆಗೆ ನೀರನ್ನು ಕೊಡಬೇಕು. ಎರಡನೇ ಬಾರಿಗೆ ನೀರು ಹಾಯಿಸುವ ವೇಳೆಗೆ ಸಸಿಗಳು ಭೂಮಿಯಲ್ಲಿ ಚೆನ್ನಾಗಿ ಸ್ಥಿರಗೊಂಡಿರುತ್ತವೆ. ಇದೇ ಸಮಯದಲ್ಲಿ ಖಾಲಿಬಿದ್ದ ಸ್ಥಳಗಳಲ್ಲಿ ಹಾಗೂ ನೆಲೆಯೂರದ ಸಸಿಗಳನ್ನು ಕಿತ್ತು ಮರುನಾಟಿ ಮಾಡಬೇಕು.
ನೀರಾವರಿ : ಈ ಬೆಳೆಗೆ ನೀರು ಕೊಡುವುದು ಮಣ್ಣಿನ ತೇವಾಂಶದ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಮೂರು ಬಾರಿ ನೀರಾವರಿ ಅಗತ್ಯವಿದ್ದು, ಉಳಿದ ಸಮಯದಲ್ಲಿ ಮಳೆಗಾಲದಲ್ಲಿ ಬಿಟ್ಟು ಅಗತ್ಯ ಬಿದ್ದಾಗ ಕೊಡಬೇಕು. ವರ್ಷದಲ್ಲಿ ಈ ಬೆಳೆಗೆ 12-15 ಬಾರಿ ನೀರಾವರಿಯ ಅಗತ್ಯವಿರುತ್ತದೆ.
ಕಳೆ ಹತೋಟಿ
ನಾಟಿ ಮಾಡಿದ ಒಂದು ತಿಂಗಳ ನಂತರ ಮೊದಲ ಬಾರಿಗೆ ಮತ್ತು ಇದಾದ 4 ವಾರಗಳ ನಂತರ ಎರಡನೇ ಬಾರಿ ಕಳೆ ತೆಗೆಯಬೇಕು. ಈ ಅವಧಿಯ ನಂತರ ಗಿಡಗಳು ಬೆಳೆದು ಪೊದೆಯಾಕಾರವಾಗುವುದರಿಂದ ಕಳೆಗಳ ಬೆಳವಣಿಗೆ ಕುಂಠಿತಗೊಳ್ಳುವುದರಿಂದ ಕಳೆ ತೆಗೆಯಬೇಕಾದ ಅವಶ್ಯಕತೆಯಿರುವುದಿಲ್ಲ.
ಕೀಟ ಮತ್ತು ರೋಗಗಳು
ರೋಗಗಳಲ್ಲಿ ಪ್ರಮುಖವಾಗಿ ಬೂದಿ ರೋಗ, ಸಸಿ ಸೊರಗು ರೋಗ ಮತ್ತು ಬೇರು ಕೊಳೆ ರೋಗಗಳು ಕಂಡುಬರುತ್ತವೆ.
ಕೀಟಗಳಲ್ಲಿ ಎಲೆಸುರುಳಿ ಸುತ್ತುವ ಹುಳುಗಳು ಕಂಡುಬರುತ್ತವೆ. ಈ ಹುಳುಗಳು ಎಲೆಗಳಲ್ಲಿ ಕೆಳಭಾಗದಲ್ಲಿದ್ದು ಅವುಗಳು ಲಂಬವಾಗಿ ಹಿಂದಕ್ಕೆ ಸುತ್ತುತ್ತವೆ. ಇದರಿಂದಾಗಿ ಎಲೆಗಳಲ್ಲಿ ಗೂಡುಗಳಾಗುತ್ತವೆ.