ಮನೆ ಸುದ್ದಿ ಜಾಲ ತುಳಸಿ  ಅತ್ಯಂತ ಪವಿತ್ರವಾದ ಗಿಡ: ಕೃಷ್ಣಮೂರ್ತಿ

ತುಳಸಿ  ಅತ್ಯಂತ ಪವಿತ್ರವಾದ ಗಿಡ: ಕೃಷ್ಣಮೂರ್ತಿ

0

ಮೈಸೂರು(Mysuru): ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನ ಆವರಣದಲ್ಲಿ ತುಳಸಿ ಪೂಜೆ (ವಿವಾಹ) ಕಾರ್ಯಕ್ರಮ ಶನಿವಾರ  ಸಂಭ್ರಮದಿಂದ ಜರುಗಿತು.

ತುಳಸಿ ಕಟ್ಟೆ ಶುಚಿಗೊಳಿಸಿ ಬಣ್ಣ ಹಚ್ಚಲಾಯಿತು ಕಬ್ಬು ಮಾವಿನ ತಳಿರು -ತೋರಣ ಹಾಗೂ ಹೂ ದಂಡೆ , ಮಾಲೆಗಳೊಂದಿಗೆ ವಿಶೇಷ ಅಲಂಕಾರ ಪೂಜೆ ಮಾಡಿದ ಬಳಿಕ ಆನಂತರ ಸಾರ್ವಜನಿಕರಿಗೆ ತುಳಸಿ ಗಿಡವನ್ನು ವಿತರಿಸಿ  ತುಳಸಿ ಮಹತ್ವಗಳನ್ನು ತಿಳಿಸಲಾಯಿತು.

ಈ ಸಂದರ್ಭ ಮಾತನಾಡಿದ ಮೈಸೂರು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಎಸ್ ಕೃಷ್ಣಮೂರ್ತಿ, ಹಿಂದೂಗಳಿಗೆ ತುಳಸಿ  ಗಿಡ  ಎಂದರೆ ಅತ್ಯಂತ ಪವಿತ್ರವಾದ ಗಿಡವಾಗಿದ್ದು, ತುಳಸಿ ಗಿಡ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಶ್ರೀಕೃಷ್ಣನ ಕಾಲದಿಂದಲೂ ತುಳಸಿಗೆ ಎಲ್ಲಾ ಗಿಡಕ್ಕಿಂತ ಶ್ರೇಷ್ಠವಾದ ಸ್ಥಾನವನ್ನು ನೀಡಲಾಗಿದೆ ಎಂದು ಹೇಳಿದರು.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ ಪ್ರತಿಯೊಂದರಲ್ಲೂ ವಿಭಿನ್ನತೆಯನ್ನು ಹೊಂದಿದೆ. ನಮ್ಮ ಸಂಸ್ಕೃತಿ ಸಂಪ್ರದಾಯ ಶ್ರೀಮಂತಿಕೆಯನ್ನು ಹೊಂದಿದ್ದು, ನಾವು ಆಚರಣೆ ಮಾಡುವ ಪ್ರತಿಯೊಂದು ಹಬ್ಬ ಹರಿದಿನಗಳು  ವಿಭಿನ್ನತೆಯೊಂದಿಗೆ   ವಿಶೇಷತೆ ಯನ್ನು ಹೊಂದಿದೆ.  ಅದರಲ್ಲಿ  ತುಳಸಿ ಮದುವೆ ಕೂಡ ಪ್ರಮುಖವಾದದದ್ದು. ಪ್ರತಿವರ್ಷ ತುಳಸಿ ವಿವಾಹವನ್ನು ಕಾರ್ತಿಕ ತಿಂಗಳ ಶುಕ್ಲ ಪಕ್ಷದ ಏಕಾದಶಿ ದಿನದಂದು ನೆರವೇರಿಸಲಾಗುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ತುಳಸಿಗಿಡವು ಹಿಂದೂ ಧರ್ಮದಲ್ಲಿನ ಜನರಿಗೆ ಅವಿಭಾಜ್ಯ ಅಂಗ ಮತ್ತು ಇದನ್ನು ಮನೆಯಲ್ಲಿ ಬೆಳೆಸಿ ಬಳಸಿದರೆ ವಿವಿಧ ಕಾಯಿಲೆಗಳು ಬರುವುದಿಲ್ಲ. ಹಾಗೇ ತುಳಸಿಗಿಡವು ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ. ಅಂದಿನ ದಿನಗಳಲ್ಲಿ ರಾಯರು ಸಹಾ ತುಳಸಿ ಗಿಡದ ಮಹತ್ವವನ್ನು ಜಗಕ್ಕೆ ಸಾರಿದ್ದರು. ಆದ್ದರಿಂದಲೇ ಅವರು ಬೃಂದಾವನದಲ್ಲಿ ಲೀನವಾದರು ಎಂದು ರಾಯರನ್ನು ಸ್ಮರಿಸಿದರು. ತುಳಸಿ ಗಿಡದ ಎಲೆಗಳನ್ನು ಬಳಸಿದರೆ ಡೆಂಗ್ಯೂ ಕಾಯಿಲೆಯೂ ವಾಸಿಯಾಗುತ್ತದೆ ಎಂದು ಹೇಳಿದರು.

250ಕ್ಕೂ ಹೆಚ್ಚು ಭಕ್ತಾದಿಗಳಿಗೆ ಉಚಿತ ತುಳಸಿ ಗಿಡಗಳನ್ನು ನೀಡಲಾಯಿತು ಇದೇ ಸಂದರ್ಭದಲ್ಲಿ ನೂರಾರು ಭಕ್ತರು ಹಾಜರಿದ್ದರು.