ಬೆಂಗಳೂರು: ಬೆಂಗಳೂರಿನಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಅಂಗಡಿಗಳಿಗೆ ಬೀಗ ಹಾಕುವ ಕೆಲಸವನ್ನು ಬಿಬಿಎಂಪಿ ಚುರುಕುಗೊಳಿಸಿದೆ. ಸೋಮವಾರ ಪಶ್ಚಿಮ ವಲಯದ ಯಶವಂತಪುರ ಆರ್‌ಟಿಒ ಕಚೇರಿ ಮುಂಭಾಗದ ಮಾರ್ಕೆಟ್ನಲ್ಲಿ ಇರುವ 32 ಅಂಗಡಿಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ.
ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ 32 ಅಂಗಡಿಗಳಿಗೆ ಬೀಗ
ಆರ್‌ಟಿಒ ಕಚೇರಿ ಮುಂಭಾಗದಲ್ಲಿ ಒಟ್ಟು 42 ಅಂಗಡಿಗಳು ಟ್ಯಾಕ್ಸ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದವು. ಈ ಪೈಕಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ಗೆ ಸೇರಿದ 32 ಅಂಗಡಿಗಳಿಗೆ ಸೇರಿದಂತೆ ಇನ್ನುಳಿದ ಅಂಗಡಿಗಳಿಗೆ ನೋಟಿಸ್ ನೀಡಲಾಗಿತ್ತು. ಆದರೆ ಟ್ಯಾಕ್ಸ್ ಪಾವತಿ ಮಾಡಿರಲಿಲ್ಲ. ಒಂದೂವರೆ ಕೋಟಿ ರೂಪಾಯಿ ಬಾಕಿ ಇದ್ದರೂ ತೆರಿಗೆ ಪಾವತಿಸಿರಲಿಲ್ಲ. ಹೀಗಾಗಿ ಸೆಂಟ್ರಲ್ ಮುಸ್ಲಿಂ ಅಸೊಸಿಯೇಷನ್‌ಗೆ ಸೇರಿದ 32 ಅಂಗಡಿಗಳಿಗೆ ಸೀಲ್ ಹಾಕಲಾಗಿದೆ. ಇನ್ನುಳಿದ ಅಂಗಡಿಗಳು ಖಾಸಗಿ ಒಡೆತನದ್ದಾಗಿರುವುದರಿಂದ ತೆರಿಗೆ ಪಾವತಿ ಮಾಡಿಸಿಕೊಳ್ಳಲಾಗಿದ್ದು, ಆ ಅಂಗಡಿಗಳಿಗೆ ಸೀಲ್ ಹಾಕಿಲ್ಲ.
ಆದರೆ ಎಸ್‌ಎಂಎಗೆ ಸೇರಿದ ಅಂಗಡಿಗಳ ಮಾಲೀಕರು ಈ ನವೆಂಬರ್ ತಿಂಗಳೊಳಗಾಗಿ ತೆರಿಗೆ ಪಾವತಿಸದಿದ್ದರೆ ಮೂರು ಪಟ್ಟು ಹಣ ಕಟ್ಟಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತೆ ಅರ್ಚನಾ ತಿಳಿಸಿದ್ದಾರೆ.
ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ಗೆ ಸೇರಿದ ಅಂಗಡಿಯ ಬಾಡಿಗೆದಾರರು ತಿಂಗಳು, ತಿಂಗಳು ಬಾಡಿಗೆ ಕಟ್ಟಿಕೊಂಡು ಹೋಗುತ್ತಿದ್ದಾರಂತೆ. ಆದರು ಕೂಡ ಎಸ್‌ಎಂಎ ಟ್ಯಾಕ್ಸ್ ಕಟ್ಟದೇ ನಿರ್ಲಕ್ಷ ವಹಿಸಿರುವುದರಿಂದ 32 ಕುಟುಂಬಗಳು ಬೀದಿಗೆ ಬಿದ್ದಿವೆ.
ತೆರಿಗೆ ಕಟ್ಟದೇ ಇರುವ ಅಂಗಡಿಗಳಿಗೆ ಬೀಗ ಹಾಕುವ ಕೆಲಸವನ್ನು ಬಿಬಿಎಂಪಿ ಮಾಡುತ್ತಾ ಇದ್ದು ತೆರಿಗೆ ಪಾವತಿಸಿದ ಬಳಿಕ ಸೀಲ್ ಓಪನ್ ಮಾಡಲಿದೆ.