ಮನೆ ಕಾನೂನು ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ: ಸುಪ್ರೀಂ ತೀರ್ಪಿಗೆ ವಿರುದ್ಧವಾದ ಆದೇಶಗಳಿದ್ದರೆ ಸಲ್ಲಿಸಲು ಸೂಚಿಸಿದ ಹೈಕೋರ್ಟ್

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ: ಸುಪ್ರೀಂ ತೀರ್ಪಿಗೆ ವಿರುದ್ಧವಾದ ಆದೇಶಗಳಿದ್ದರೆ ಸಲ್ಲಿಸಲು ಸೂಚಿಸಿದ ಹೈಕೋರ್ಟ್

0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ವಾರ್ಡ್’ಗಳ ಪುನರ್ ವಿಂಗಡಣೆ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಶಾಸಕರಾದ ಸೌಮ್ಯ ರೆಡ್ಡಿ, ಜಮೀರ್ ಅಹ್ಮದ್ ಖಾನ್, ಎಂ ಸತೀಶ್ ರೆಡ್ಡಿ ಸೇರಿದಂತೆ ಅನೇಕರು ಸಲ್ಲಿಸಿರುವ 14 ಅರ್ಜಿಗಳ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 21ಕ್ಕೆ ತೀರ್ಪು ಕಾಯ್ದಿರಿಸಿದೆ.

ಸುಮಾರು ಒಂದು ತಾಸು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ಪೀಠವು ವಿಚಾರಣೆ ತೀರ್ಪು ಕಾಯ್ದಿರಿಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಸಂದೀಪ್ ಪಾಟೀಲ್ ಸೇರಿದಂತೆ ಹಲವರು “ಪ್ರತಿ ವಾರ್ಡ್‌ನಲ್ಲಿ ಸಮಾನ ಸಂಖ್ಯೆಯ ಮತದಾರರು ಇರಬೇಕು. ಆದರೆ, ಇದಕ್ಕೆ ವಿರುದ್ದವಾದ ನಿಲುವು ಅನುಸರಿಸಲಾಗಿದೆ. ಕೆಲವು ಕಡೆ ಮತದಾರರ ಸಂಖ್ಯೆ ಅಜಗಜಾಂತರವಿದೆ” ಎಂದು ಆಕ್ಷೇಪಿಸಿದರು.

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ವಾರ್ಡ್‌ಗಳಲ್ಲಿ ಜನಸಂಖ್ಯೆಯ ವ್ಯತ್ಯಾಸಗಳಿರಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಹೀಗಾಗಿ, ಅರ್ಜಿದಾರರ ವಾದವನ್ನು ಪರಿಗಣಿಸಬಾರದು. ಚುನಾವಣೆ ನಡೆಸಲು ಅನುವು ಮಾಡಿಕೊಡಬೇಕು” ಎಂದು ಕೋರಿದರು.

ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿದಾರರ ಪರ ವಕೀಲರಿಗೆ ವಾರ್ಡ್‌ಗಳಲ್ಲಿನ ಮತದಾರರ ವ್ಯತ್ಯಾಸದ ಕುರಿತು ಸುಪ್ರೀಂ ಕೋರ್ಟ್‌ಗೆ ವಿರುದ್ಧವಾದ ಆದೇಶಗಳು ಇದ್ದರೆ ಸಲ್ಲಿಸಬಹುದು ಎಂದಿತು.

ಚಾಮರಾಜಪೇಟೆ, ಜಯನಗರ ಮತ್ತಿತರ ಕಡೆ ವಿರೋಧ ಪಕ್ಷದ ಶಾಸಕರು ಇರುವ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆ ತಗ್ಗಿಸಲಾಗಿದೆ. ಕೆಲವು ವಾರ್ಡ್ಗಳ ಮತದಾರರ ಸಂಖ್ಯೆ 34 ಸಾವಿರ ಇದ್ದರೆ, ಕೆಲವು ವಾರ್ಡ್‌ಗಳಲ್ಲಿ 39 ಸಾವಿರ ಮತದಾರರ ಸಂಖ್ಯೆ. ಇನ್ನ ಕೆಲವು ಕಡೆ ವಾರ್ಡ್‌ಗಳನ್ನು ಎರಡು ವಿಧಾನಸಭಾ ಕ್ಷೇತ್ರಗಳ ನಡುವೆ ವಿಭಜಿಸಲಾಗಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ. ಮತ್ತೊಂದು ಕಡೆ ಆಡಳಿತ ಪಕ್ಷದ ಬೊಮ್ಮನಹಳ್ಳಿ ವಿಧಾನಸಭಾ ಕೇತ್ರದ ಶಾಸಕ ಎಂ ಸತೀಶ್ ರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಬರುವ ಕೆಲವು ವಾರ್ಡ್‌ಗಳನ್ನು ವಿಭಜಿಸಿ, ಪಕ್ಕದ ವಿಧಾನಸಭಾ ಕ್ಷೇತ್ರದ ವಾರ್ಡ್ಗಳ ಜೊತೆ ಸೇರ್ಪಡೆಗೊಳಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಹೆಚ್ಚಳದ ಆಧಾರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡ್‌ಗಳನ್ನು ರಚಿಸಲಾಗಿದೆ” ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದ್ದಾರೆ.