ಮನೆ ಕ್ರೀಡೆ ಏಷ್ಯನ್ ಗೇಮ್ಸ್​ ಗೆ ಟೀಂ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಗ್ರೀನ್ ಸಿಗ್ನಲ್

ಏಷ್ಯನ್ ಗೇಮ್ಸ್​ ಗೆ ಟೀಂ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಗ್ರೀನ್ ಸಿಗ್ನಲ್

0

ಏಷ್ಯನ್ ಗೇಮ್ಸ್​ನಲ್ಲಿ ಕ್ರಿಕೆಟ್​ ಅನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತಿದ್ದು, ಬಿಸಿಸಿಐ ಜೂನ್ 30ರ ಮೊದಲು ಆಟಗಾರರ ಪಟ್ಟಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಸಲ್ಲಿಸಲಿದೆ.

Join Our Whatsapp Group

ಈ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ​ಗೆ ಟೀಂ ಇಂಡಿಯಾವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬಿಸಿಸಿಐ ಇದೀಗ ವಿಶ್ವಕಪ್ ಸಮಯದಲ್ಲೇ ಆರಂಭವಾಗಲಿರುವ ಏಷ್ಯನ್​ ಗೇಮ್ಸ್​ ಗೆ ಪುರುಷರ ಮತ್ತು ಮಹಿಳಾ ತಂಡಗಳನ್ನು ಕಳುಹಿಸಲು ಒಪ್ಪಿಗೆ ನೀಡಿದೆ.

ಸೆಪ್ಟೆಂಬರ್ 23 ರಂದು ಆರಂಭವಾಗಲಿರುವ ಏಷ್ಯನ್​ ಗೇಮ್ಸ್​ ಗೆ ಪೂರ್ಣ ಪ್ರಮಾಣದ ಮಹಿಳಾ ತಂಡವನ್ನು ಕಳುಹಿಸಲು ಮುಂದಾಗಿರುವ ಬಿಸಿಸಿಐ, ಪುರುಷರ ತಂಡದಲ್ಲಿ ಕೊಂಚ ಬದಲಾವಣೆ ಮಾಡಿದೆ. ಆ ಬದಲಾವಣೆಯ ಪ್ರಕಾರ ಏಷ್ಯನ್ ಗೇಮ್ಸ್ ​ನಲ್ಲಿ ಪುರುಷರ ಬಿ ತಂಡ ಕಣಕ್ಕಿಳಿಯಲಿದೆ.

ಏಷ್ಯನ್ ಗೇಮ್ಸ್ ​ನಲ್ಲಿ ಕ್ರಿಕೆಟ್​ ಅನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತಿದ್ದು, ಬಿಸಿಸಿಐ ಜೂನ್ 30ರ ಮೊದಲು ಆಟಗಾರರ ಪಟ್ಟಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಸಲ್ಲಿಸಲಿದೆ. ಈ ಮೊದಲು ವಿಶ್ವಕಪ್ ಆಯೋಜನೆಯಿಂದಾಗಿ ಟೀಂ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಒಪ್ಪಿರಲಿಲ್ಲ.

ಏಕೆಂದರೆ 2023 ರ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 23 ರಂದು ಆರಂಭವಾಗಿ ಅಕ್ಟೋಬರ್ 8 ರವರೆಗೆ ಚೀನಾದ ಹ್ಯಾಂಗ್‌ ಝೌನಲ್ಲಿ ನಡೆಯಲಿದೆ. ಆದರೆ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಆರಂಭವಾಗಲಿದೆ. ಹೀಗಾಗಿ ಭಾರತ ಪುರುಷರ ತಂಡ ಏಷ್ಯನ್ ಗೇಮ್ಸ್ ​ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ.

ಈಗ ಇಂಡಿಯನ್ ಎಕ್ಸ್‌ ಪ್ರೆಸ್‌ ನ ವರದಿಯ ಪ್ರಕಾರ, ಆಡಳಿತ ಮಂಡಳಿಯು ಏಷ್ಯನ್ ಗೇಮ್ಸ್‌ಗೆ ಪುರುಷರ ಬಿ ತಂಡವನ್ನು ಕಳುಹಿಸಲಿದೆ. ಬಹುಪಾಲು ಹಿರಿಯ ಸ್ಟಾರ್ ಆಟಗಾರರು ಭಾರತದ ವಿಶ್ವಕಪ್ ತಂಡದ ಭಾಗವಾಗುತ್ತಾರೆ. ಆದರೆ ಭಾರತೀಯ ಕ್ರಿಕೆಟ್‌ ನಲ್ಲಿ 2 ರಿಂದ 3 ತಂಡಗಳನ್ನು ಕಟ್ಟುವಷ್ಟು ಕ್ರಿಕೆಟ್ ಪ್ರತಿಭೆಗಳಿದ್ದು, ಇಂತಹ ಪ್ರತಿಭಾವಂತ ಆಟಗಾರರನ್ನು ಏಷ್ಯನ್ ಗೇಮ್ಸ್‌ ಗೆ ಕಳುಹಿಸಲು ಬಿಸಿಸಿಐ ಚಿಂತಿಸಿದೆ ಎಂದು ವರದಿ ಮಾಡಿದೆ.

ಗಮನಾರ್ಹವೆಂದರೆ ಏಷ್ಯನ್ ಗೇಮ್ಸ್‌ ನಲ್ಲಿ ಭಾರತ ಕ್ರಿಕೆಟ್ ತಂಡಗಳು ಭಾಗವಹಿಸುತ್ತಿರುವುದು ಇದೇ ಮೊದಲು. ಜುಲೈ ಮತ್ತು ಆಗಸ್ಟ್‌ ನಲ್ಲಿ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ತಂಡವು ಕಾಣಿಸಿಕೊಂಡಿತ್ತು. ಆದರೆ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಕ್ರಿಕೆಟ್ ಆಟವನ್ನು ಮೊದಲ ಬಾರಿಗೆ 2010 ರ ಏಷ್ಯನ್ ಗೇಮ್ಸ್‌ ನಲ್ಲಿ ಸೇರಿಸಲಾಯಿತು. ಬಳಿಕ 2014 ರ ಆವೃತ್ತಿಯವರೆಗು ಕ್ರಿಕೆಟ್​ ಏಷ್ಯನ್​ ಗೇಮ್ಸ್​ ನ ಭಾಗವಾಗಿತ್ತು. ಆದಾಗ್ಯೂ, ಜಕಾರ್ತಾದಲ್ಲಿ ನಡೆದ 2018 ರ ಆವೃತ್ತಿಯಲ್ಲಿ ಕ್ರಿಕೆಟ್​ ಅನ್ನು ಕ್ರೀಡಾಕೂಟದಿಂದ ಕೈಬಿಡಲಾಗಿತ್ತು. ಆ ಬಳಿಕ 2022ರ ಕ್ರೀಡಾಕೂಟಕ್ಕೆ ಮತ್ತೆ ಕ್ರಿಕೆಟ್​ ಅನ್ನು ಸೇರಿಸಲಾಯಿತ್ತಾದರೂ, ಕೊರೊನಾದಿಂದಾಗಿ ಕ್ರೀಡಾಕೂಟವನ್ನು ಮುಂದೂಡಲಾಗಿತ್ತು.