ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ಪುರುಷರ ಕೋಚಿಂಗ್ ಸಿಬ್ಬಂದಿಗೆ ಹೊಸ ಸದಸ್ಯರನ್ನು ಸೇರಿಸಲು ಹೊರಟಿದೆ ಎಂದು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನವನ್ನು ಪರಿಗಣಿಸಿ ಬಿಸಿಸಿಐ ಈ ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಬ್ಯಾಟಿಂಗ್ ಕೋಚ್ ಅನ್ನು ನೇಮಿಸುವ ಸಾಧ್ಯತೆಯನ್ನು ಬಿಸಿಸಿಐ ಎದುರು ನೋಡುತ್ತಿದೆ. ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ, ಬಿಸಿಸಿಐ ಮತ್ತು ತಂಡದ ಆಡಳಿತ ಮಂಡಳಿಯೊಳಗಿನ ಚರ್ಚೆಗಳು ಸಹಾಯಕ ಸಿಬ್ಬಂದಿಯನ್ನು ಬಲಪಡಿಸುವ ಅಗತ್ಯವನ್ನು ಸೂಚಿಸುತ್ತವೆ.
ಕೆಲವು ದಿಗ್ಗಜ ಆಟಗಾರರು ಸೇರಿ ಹಲವರು ಹೆಸರು ಕೋಚ್ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ನಸ್ ಅವರು ಕೂಡಾ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆದರೆ ಇದುವರೆಗೆ ಯಾವುದೂ ಅಂತಿಮವಾಗಿಲ್ಲ.
ಪ್ರಸ್ತುತ, ಭಾರತದ ಕೋಚಿಂಗ್ ಸಿಬ್ಬಂದಿಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆಗೆ ಮಾರ್ನೆ ಮಾರ್ಕೆಲ್ (ಬೌಲಿಂಗ್ ಕೋಚ್), ಅಭಿಷೇಕ್ ನಾಯರ್ (ಸಹಾಯಕ ಕೋಚ್), ರಯಾನ್ ಟೆನ್ ಡೋಸ್ಕೆಟ್ (ಸಹಾಯಕ ಕೋಚ್) ಮತ್ತು ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಇದ್ದಾರೆ.
ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಮತ್ತು ಇತ್ತೀಚಿನ ಟೆಸ್ಟ್ ಕ್ರಿಕೆಟ್ ಸೋಲುಗಳ ನಂತರ, ಕೋಚಿಂಗ್ ಸಿಬ್ಬಂದಿಯ ಪಾತ್ರ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಭಾರೀ ಟೀಕೆಗಳು ಕೇಳಿಬಂದಿವೆ. ವಿಶೇಷವಾಗಿ ವಿರಾಟ್ ಕೊಹ್ಲಿಯಂತಹ ಆಟಗಾರರು ಸತತವಾಗಿ ಒಂದೇ ರೀತಿಯಾಗಿ ಔಟ್ ಆಗುತ್ತಿದ್ದಾರೆ. ಹೀಗಾಗಿ ಬ್ಯಾಟೀಂಗ್ ಕೋಚ್ ಅಗತ್ಯತೆಯ ಬಗ್ಗೆ ಮಾತು ಕೇಳಿ ಬಂದಿತ್ತು.