ಮನೆ ಕಾನೂನು ಎಐಬಿಇ ಪರೀಕ್ಷೆಗೆ ಬಿಸಿಐ ₹ 3,500 ಶುಲ್ಕ: ತೆಲಂಗಾಣ ಹೈಕೋರ್ಟ್‌ ನಲ್ಲಿ ಪ್ರಶ್ನೆ

ಎಐಬಿಇ ಪರೀಕ್ಷೆಗೆ ಬಿಸಿಐ ₹ 3,500 ಶುಲ್ಕ: ತೆಲಂಗಾಣ ಹೈಕೋರ್ಟ್‌ ನಲ್ಲಿ ಪ್ರಶ್ನೆ

0

ಅಖಿಲ ಭಾರತ ವಕೀಲರ ಪರೀಕ್ಷೆಯ (ಎಐಬಿಇ) 19ನೇ ಆವೃತ್ತಿಗೆ ಸಂಬಂಧಿಸಿದಂತೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ₹3,500 ಶುಲ್ಕ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್‌ ಶೀಘ್ರವೇ ಕೈಗೆತ್ತಿಕೊಳ್ಳಲಿದೆ.

Join Our Whatsapp Group

ಎಐಬಿಇ XIX ಸಾಮಾನ್ಯ ಅಭ್ಯರ್ಥಿಗಳಿಗೆ ₹ 3,500 ಶುಲ್ಕ ವಿಧಿಸುತ್ತಿರುವುದನ್ನು ಪ್ರಶ್ನಿಸಿ ವಕೀಲ ವಿಜಯ್ ಗೋಪಾಲ್ ಅವರು ಅರ್ಜಿ ಸಲ್ಲಿಸಿದ್ದಾರೆ.

ವಕೀಲರ ಕಾಯಿದೆ, 1961 ರ ಸೆಕ್ಷನ್ 24(1)(f) ಅಡಿಯಲ್ಲಿ ರಾಜ್ಯ ವಕೀಲರ ಪರಿಷತ್ತುಗಳು ಸಂಗ್ರಹಿಸುವ ನೋಂದಣಿ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಕಡ್ಡಾಯ ಪರೀಕ್ಷೆಯನ್ನು ಬರೆಯಲು ಪ್ರತ್ಯೇಕವಾಗಿ ವಿಧಿಸುವುದು ಗೌರವ್‌ ಕುಮಾರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಬಿಸಿಐ ಪ್ರತಿಕ್ರಿಯೆ ಕೇಳಿದೆ. ನವೆಂಬರ್ 27 ರಂದು ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ಅವರು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಎಐಬಿಇ ಕಡ್ಡಾಯ ಪರೀಕ್ಷೆಯಾಗಿರುವುದರಿಂದ ಗೌರವ್‌ ಕುಮಾರ್‌ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಮಿತಿಗಳಿಗೆ ಅನುಗುಣವಾಗಿ ಬಿಸಿಐ ವಿಧಿಸುವ ಶುಲ್ಕ ಇರಬೇಕು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಗೌರವ್ ಕುಮಾರ್ ತೀರ್ಪಿನಲ್ಲಿ, ರಾಜ್ಯ ವಕೀಲರ ಪರಿಷತ್ತುಗಳು ಮತ್ತು ಬಿಸಿಸಿಐ ವಿಧಿಸುವ ನೋಂದಣಿ ಶುಲ್ಕಗಳು ವಕೀಲರ ಕಾಯಿದೆ ಸೆಕ್ಷನ್ 24 (1) (ಎಫ್) ನಲ್ಲಿ ಸೂಚಿಸಿದ ಮಿತಿಗಳನ್ನು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಸೆಕ್ಷನ್‌ ಪ್ರಕಾರ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹750 ದಾಖಲಾತಿ ಶುಲ್ಕ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹125 ಶುಲ್ಕವನ್ನು ನಿಗದಿಯಾಗಿದೆ.

ಅಧಿಕ ದಾಖಲಾತಿ ಶುಲ್ಕವನ್ನು ವಿಧಿಸದಂತೆ ಸುಪ್ರೀಂ ಕೋರ್ಟ್ ಹೇಳಿರುವುದರಿಂದ, ಎಐಬಿಇ ರೀತಿಯ ಕಡ್ಡಾಯ ಪರೀಕ್ಷೆ ಬರೆಯಲು ಬಿಸಿಐ ₹ 3,500 ಶುಲ್ಕ ವಿಧಿಸುವಂತಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.