ಮನೆ ಕಾನೂನು ವಕೀಲರ ನೋಂದಣಿ ಶುಲ್ಕ ಹೆಚ್ಚಳ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಬಿಸಿಐ: ಆರ್ಥಿಕ ಬಿಕ್ಕಟ್ಟಿನ...

ವಕೀಲರ ನೋಂದಣಿ ಶುಲ್ಕ ಹೆಚ್ಚಳ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಬಿಸಿಐ: ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪ

0

ರಾಜ್ಯ ವಕೀಲರ ಪರಿಷತ್ತುಗಳು ವಕೀಲರ ನೋಂದಣಿ ಶುಲ್ಕ ಹೆಚ್ಚಿಸಲು ಅನುವಾಗುವಂತೆ ವಕೀಲರ ಕಾಯಿದೆ-1961ಕ್ಕೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

Join Our Whatsapp Group

ವಕೀಲರ ಕಾಯಿದೆ ಸೂಚಿಸಿದ ಮಿತಿಗಿಂತ ಹೆಚ್ಚಿನ ನೋಂದಣಿ ಶುಲ್ಕ ವಿಧಿಸುವಂತಿಲ್ಲ ಎಂದು ಜುಲೈ 2024ರಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ವಕೀಲರ ಪರಿಷತ್ತುಗಳು ಮತ್ತು ಬಿಸಿಐಗೆ ಆದೇಶಿಸಿತ್ತು.

ಪರಿಣಾಮ ವಕೀಲರ ಪರಿಷತ್ತುಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ₹750 ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ₹125 ಸಂಗ್ರಹಿಸಲಷ್ಟೇ ಅವಕಾಶ ಇದೆ.

ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ವಕೀಲರ ಪರಿಷತ್ತುಗಳು ಹೆಚ್ಚಿನ ಶುಲ್ಕ ನಿಗದಿಪಡಿಸುತ್ತಿರುವ ಸಂಬಂಧ ಕಳವಳ ಮೂಡಿದ್ದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿತ್ತು.

ನೋಂದಣಿ ಶುಲ್ಕವೇ ವಕೀಲರ ಪರಿಷತ್ತುಗಳ ಮುಖ್ಯ ಆದಾಯ ಮೂಲವಾಗಿದೆ. ಈ ಆದಾಯವಿಲ್ಲದೆ ಸಿಬ್ಬಂದಿ ವೇತನ ಮತ್ತಿತರ ಶುಲ್ಕ ಪಾವತಿಸುವುದು ಅಸಾಧ್ಯವಾಗುವುದರಿಂದ ಪರಿಷತ್ತುಗಳ ಕಾರ್ಯ ನಿರ್ವಹಣೆ ಕಷ್ಟಕರವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಬಿಸಿಐ ಸಲ್ಲಿಸಿರುವ ಅರ್ಜಿ ತಿಳಿಸಿದೆ. 

ರೂ.600/- ಕ್ಕಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತುಗಳಿಗೆ ನಿರ್ಬಂಧ ವಿಧಿಸಿದರೆ ವಕೀಲರ ಪರಿಷತ್ತುಗಳು ಮತ್ತು ಬಿಸಿಐ ತಮ್ಮಷ್ಟಕ್ಕೆ ತಾವೇ ಅಂತ್ಯವಾಗುತ್ತವೆ. ಆದ್ದರಿಂದ ಈಗ ನಿಗದಿಪಡಿಸಿರುವ ಮಿತಿಯನ್ನು ಮೀರಿ ಶುಲ್ಕ ಹೆಚ್ಚಳಕ್ಕೆ ಅನುವು ಮಾಡಿಕೊಡುವುದಕ್ಕಾಗಿ ವಕೀಲರ ಕಾಯಿದೆಗೆ ಸೂಕ್ತ ತಿದ್ದುಪಡಿಯಾಗಬೇಕು. ಶುಲ್ಕ ಹೆಚ್ಚಳ ನಡೆದದ್ದು 1993 ರಲ್ಲಿ. ಬೆಲೆ ಏರಿಕೆಯ ಹೊರತಾಗಿಯೂ ಶುಲ್ಕದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂತಲೂ ಬಿಸಿಐ ವಿವರಿಸಿದೆ.

ವಕೀಲರ ಕಾಯಿದೆಗೆ ತಿದ್ದುಪಡಿ ತಂದು ಸಾಮಾನ್ಯ ವರ್ಗದ ಅಭ್ಯರ್ಥಿಗಳ ನೋಂದಣಿ ಶುಲ್ಕವನ್ನು ₹25,000ಕ್ಕೆ ಮತ್ತು ಬಿಸಿಐ ನಿಧಿಯನ್ನು ₹6,250ಕ್ಕೆ ಏರಿಕೆ ಮಾಡುವಂತೆ ಕೋರಿ ಬಿಸಿಐ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು.ರಾಜ್ಯ ವಕೀಲರ ಪರಿಷತ್ತುಗಳಲ್ಲಿ ನೋಂದಾಯಿಸಿಕೊಳ್ಳುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳ ನೋಂದಣಿ ಶುಲ್ಕವನ್ನು ₹10,000 ಬಿಸಿಐ ನಿಧಿಯನ್ನು₹2,500ಕ್ಕೆ ಏರಿಕೆ ಮಾಡುವಂತೆ ಅದು ತಿಳಿಸಿತ್ತು.