ಬೆಂಗಳೂರು: ನಗರದ 9 ಕಡೆಗಳಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ತೀವ್ರ ತರದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಬಿಡಿಎ ಮಧ್ಯವರ್ತಿ ಮೋಹನ್ ಕುಮಾರ್ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೋಹನ್ ವಿರುದ್ಧ ಭ್ರಷ್ಟಾಚಾರ, ಅವ್ಯವಹಾರದ ಆರೋಪದ ದೂರು ಸಿಕ್ಕಿರುವ ಹಿನ್ನೆಲೆ ಆರ್.ಟಿ.ನಗರದ ಮನೋರಾಯನಪಾಳ್ಯದಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಭವ್ಯ ಬಂಗಲೆಯನ್ನೇ ಮೋಹನ್ ನಿರ್ಮಿಸಿದ್ದಾರೆ. ಈ ನಿವಾಸದಲ್ಲಿ ದಾಳಿ ವೇಳೆ ಇದೀಗ ಬರೋಬ್ಬರಿ 4.960 ಕೆಜಿ ಚಿನ್ನ ಪತ್ತೆಯಾಗಿದೆ. ಅಂದಾಜು ಎರಡೂವರೆ ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ.
ಅಲ್ಲದೇ 15.02 ಕೆ.ಜಿ ಬೆಳ್ಳಿ, 61.9 ಗ್ರಾಂ. ವಜ್ರ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ. ಇದರ ಜೊತೆಗೆ ಅಪಾರ ಪ್ರಮಾಣದ ಹಣದ ಕಂತೆ, ಬೆಳ್ಳಿ ತಟ್ಟೆ, ಲೋಟ, ಬಟ್ಟಲು, ದೀಪ, ಚಿನ್ನದ ಸರ, ಚಿನ್ನದ ಓಲೆ, ಭಾರೀ ಬೆಲೆಯ ಸೀರೆಗಳು, ಚಿನ್ನದ ಡಾಬು ಸಿಕ್ಕಿದೆ. ಎಸಿಬಿ ಡಿವೈಎಸ್ಪಿ ಪ್ರಕಾಶ್ ರೆಡ್ಡಿ, ಇನ್ಸ್‌ಪೆಕ್ಟರ್ ಮಂಜುನಾಥ್ ಸೇರಿದಂತೆ 9 ಅಧಿಕಾರಿಗಳ ತಂಡದಿಂದ ಶೋಧಕಾರ್ಯ ಮುಂದುವರೆದಿದೆ.
ಮತ್ತೊಬ್ಬ ಮಧ್ಯವರ್ತಿ ಮನೋಜ್ ನ ದೊಮ್ಮಲೂರಿನಲ್ಲಿರುವ ಬಂಗಲೆಯಂತಹ ಮನೆಯಲ್ಲಿ 22 ವಾಚ್, 19 ಸನ್ ಗ್ಲಾಸ್, ಹಣ, ಚಿನ್ನಾಭರಣ ಪತ್ತೆಯಾಗಿದೆ. ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.