ಮನೆ ಅಪರಾಧ ಬಿಡಿಎ ಕಾರ್ಯಾಚರಣೆ: 35 ಕೋಟಿ ರೂ.ಮೌಲ್ಯದ ಆಸ್ತಿ ವಶ

ಬಿಡಿಎ ಕಾರ್ಯಾಚರಣೆ: 35 ಕೋಟಿ ರೂ.ಮೌಲ್ಯದ ಆಸ್ತಿ ವಶ

0

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗುರುವಾರ ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬನಶಂಕರಿ 2ನೇ ಹಂತದ ಕತ್ರಿಗುಪ್ಪೆಯಲ್ಲಿ 35 ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಬಳಕೆಗೆ ಮೀಸಲಿರಿಸಿದ ಜಾಗವನ್ನು (ಸಿಎ) ವಶಪಡಿಸಿಕೊಂಡಿದೆ.

Join Our Whatsapp Group

ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಕತ್ರಿಗುಪ್ಪೆ ಗ್ರಾಮದ (ಬನಶಂಕರಿ 2ನೇ ಹಂತ) ಸರ್ವೆ ನಂ. 15/1ರಲ್ಲಿನ 19 ಗುಂಟೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳು, ಗ್ಯಾರೇಜ್, ಗುಜರಿ ಅಂಗಡಿ, ದೇವಸ್ಥಾನವನ್ನು ಜೆಸಿಬಿ ಬಳಸಿ ತೆರವು ಮಾಡಿದರು.

ಬೆಳಿಗ್ಗೆ 9 ಗಂಟೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಶೆಟ್ ನಲ್ಲಿ ತಾತ್ಕಾಲಿಕ ಮುನೇಶ್ವರ ದೇವಾಲಯ ನಿರ್ಮಿಸಲಾಕಿತ್ತು. ಇದನ್ನು ಕೆಡವಲು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿತ್ತು. ಬಳಿಕ ವಿಗ್ರಹವನ್ನು ನಾವು ಮುಟ್ಟುವುದಿಲ್ಲ. ಸ್ಥಳೀಯರು ಅದನ್ನು ಸ್ಥಳಾಂತರಿಸಬಹುದು ಎಂದು ಹೇಳಿದ್ದೆವು. ಬಳಿಕ ದೇವಾಲಯದ ರಚನೆಯನ್ನು ಮಾತ್ರ ಕೆಡವಲಾಯಿತು. ಇದಲ್ಲದೆ. ಶೆಡ್ ನಲ್ಲಿದ್ದ ಗುಜರಿಗೆ ಸೇರಿದ ಒಟ್ಟು 23 ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು ಎಂದು ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣ ಕುಮಾರ್ ಅವರು ಹೇಳಿದ್ದಾರೆ.

30 ವರ್ಷಗಳ ಹಿಂದೆ ಈ ಭೂಮಿಯನ್ನು ಅತಿಕ್ರಮಿಸಲಾಗಿತ್ತು. ಇತ್ತೀಚೆಗಷ್ಟೇ ಭೂಮಿ ವಶಕ್ಕೆ ಪಡೆಯುವಂತೆ ನ್ಯಾಯಾಲಯ ನಮಗೆ ಅನುಮತಿ ನೀಡಿತ್ತು. ಹದಿನೈದು ದಿನಗಳ ಹಿಂದೆಯೇ ನೋಟಿಸ್ ಜಾರಿ ಮಾಡಿ, ಆಸ್ತಿ ವಶಪಡಿಸಿಕೊಳ್ಳುವ ಕುರಿತು ಮಾಹಿತಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.