ಮೈಸೂರು: ವಿದ್ಯುನ್ಮಾನ ಮತ ಯಂತ್ರದ ಮೂಲಕ ಮತದಾನ ಮಾಡುವುದರ ಬಗ್ಗೆ ಹೆಚ್ಚು ಜನರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಪ್ರಾತ್ಯಕ್ಷಿಕೆ ಕೇಂದ್ರವನ್ನು ಉದ್ಘಾಟಿಸಿದ ಅವರು ಸಾರ್ವಜನಿಕರೊಬ್ಬರಿಂದ ಮತದಾನ ಮಾಡಿಸುವ ಮೂಲಕ ಇವಿಎಂ ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸಿದರು.
ಕಚೇರಿಗೆ ಬರುವ ಎಲ್ಲಾ ಸಾರ್ವಜನಿಕರಿಗೆ ಸಿಬ್ಬಂದಿಯೋರ್ವರು ಸದಾ ಕೇಂದ್ರದಲ್ಲಿ ಜಾಗರೂಕರಾಗಿದ್ದು ಇವಿಎಂ ಮೂಲಕ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ, ಚುನಾವಣಾ ತಹಸೀಲ್ದಾರರಾದ ರಾಮಪ್ರಸಾದ್ ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಬಿ, ಎನ್ ನಂದಿನಿ, ಅಬಕಾರಿ ಇಲಾಖೆಯ ಆಯುಕ್ತರಾದ ರವಿಶಂಕರ್ ಅವರು ಭಾಗವಹಿಸಿದ್ದರು.