ಮನೆ ಪ್ರವಾಸ ದಕ್ಷಿಣ ಭಾರತದಲ್ಲಿ ನಿಮಗೆ ತಿಳಿದಿರದ ಸುಂದರ ಪ್ರವಾಸಿ ತಾಣಗಳು

ದಕ್ಷಿಣ ಭಾರತದಲ್ಲಿ ನಿಮಗೆ ತಿಳಿದಿರದ ಸುಂದರ ಪ್ರವಾಸಿ ತಾಣಗಳು

0

ದಕ್ಷಿಣ ಭಾರತವು ತನ್ನದೇ ಆದ ವಿವಿಧ ಭಾಷೆ, ಸೊಗಸಾದ ಸಂಸ್ಕೃತಿ, ಶ್ರೀಮಂತ ಪ್ರಾಕೃತಿಕ ಸೊಬಗು, ದೈವಿಕತೆಯನ್ನು ಹೆಚ್ಚಿಸುವ ಭವ್ಯ ಆಲಯಗಳನ್ನು ಹೊಂದಿದೆ.

ಇನ್ನು ಕೆಲವು ರಾಜ್ಯಗಳಲ್ಲಿ ಗುಪ್ತ ರತ್ನಗಳು ಎಂದು ಕರೆಯಲ್ಪಡುವ ಸುಂದರವಾದ ಪ್ರವಾಸಿ ಸ್ಥಳಗಳನ್ನು ಹೊಂದಿದೆ.

ಪೊನ್ಮುಡಿ ಬೆಟ್ಟಗಳು

ಪೊನ್ಮುಡಿ ಬೆಟ್ಟಗಳು ಕೇರಳ ರಾಜ್ಯದಲ್ಲಿದ್ದು, ಇದನ್ನು ‘ಕೇರಳದ ಕಾಶ್ಮೀರ’ ಎಂದೇ ಕರೆಯುತ್ತಾರೆ. ತಿರುವನಂತಪುರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಈ ಪೊನ್ಮುಡಿ ಬೆಟ್ಟಗಳು ಉಷ್ಣವಲಯದ ದಟ್ಟ ಅರಣ್ಯದ ಅದ್ಭುತ ನೋಟವನ್ನು ನೋಡುಗರಿಗೆ ಒದಗಿಸುತ್ತದೆ.

ಇದೊಂದು ಬೆಟ್ಟ ಮಾತ್ರವಲ್ಲ, ಕೇರಳದ ಆಹ್ಲಾದಕರವಾದ ಗಿರಿಧಾಮವು ಹೌದು. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗ ಇದಾಗಿದ್ದು, ಹನಿಮೂನ್ಗೆ ಒಂದೊಳ್ಳೆ ತಾಣ ಇದಾಗಿದೆ. ಇಲ್ಲಿ ಪೆಪ್ಪಾರ ವನ್ಯಜೀವಿ ಅಭಯಾರಣ್ಯ, ಕೊಯಿಕ್ಕಲ್ ಅರಮನೆಗಳಂತಹ ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳಗಳಿವೆ.

ಅತಿರಪಲ್ಲಿ ಜಲಪಾತ

ಅತಿರಪಲ್ಲಿ ಜಲಪಾತ ಕೇರಳ ರಾಜ್ಯದ ಅತ್ಯಂತ ಸುಂದರವಾದ ಜಲಪಾತವಾಗಿದೆ. ಇದು ತ್ರಿಶೂರ್ ಜಿಲ್ಲೆಯಲ್ಲಿನ ಅತಿರಪಳ್ಳಿ ಗ್ರಾಮದಲ್ಲಿದೆ. ಪಶ್ಚಿಮ ಘಟ್ಟಗಳ ನೆಲೆಯಾಗಿರುವ ಈ ತಾಣದಲ್ಲಿ ಅತಿರಪಲ್ಲಿ ಜಲಪಾತವು ಕಣ್ಮನ ಸೆಳೆಯುತ್ತದೆ.

ಇದು ಕೇರಳ ರಾಜ್ಯದ ಅತಿ ದೊಡ್ಡ ಜಲಪಾತವಾಗಿದ್ದು, ಹಚ್ಚ ಹಸಿರಿನ ಕಾಡಿನ ಹೃದಯಭಾಗದಲ್ಲಿ ನೆಲೆಸಿದೆ. ಈ ತಾಣವು ಅಳಿವಿನಂಚಿನಲ್ಲಿರುವ ಪ್ರಾಣಿಗಳ ವಾಸಸ್ಥಾನವಾಗಿದೆ. ಅತಿರಪಲ್ಲಿ ಜಲಪಾತ ವೀಕ್ಷಣೆಗಾಗಿ ವಾರಾಂತ್ಯದ ಸಮಯದಲ್ಲಿ ಕೇರಳದ ಮಂದಿ ಭೇಟಿ ನೀಡುತ್ತಿರುತ್ತಾರೆ.

ಅರಕು ಕಣಿವೆ

ವಿಶಾಖಪಟ್ಟಣಂ ಸಮೀಪದಲ್ಲಿರುವ ಈ ಅರಕು ಕಣಿವೆಯು ಪ್ರಕೃತಿ ಮತ್ತು ವನ್ಯಜೀವಿಗಳನ್ನು ಇಷ್ಟಪಡುವವರಿಗೆ ಸೂಕ್ತವಾದ ತಾಣವಾಗಿದೆ. ಕಾಫಿ ಪ್ರಿಯರಿಗಂತು ಸ್ವರ್ಗ ಎಂದೇ ಹೇಳಬಹುದು.

ಇದು ವಿಶಾಖಪಟ್ಟಣಂ ನಗರದಿಂದ ಸುಮಾರು 111 ಕಿ.ಮೀ ದೂರದಲ್ಲಿದೆ. ವಿಶೇಷವಾಗಿ ಅರಕು ಕಣಿವೆಯನ್ನು ‘ಆಂಧ್ರದ ಊಟಿ’ ಎಂದೇ ಕರೆಯುತ್ತಾರೆ. ನಮ್ಮ ದಕ್ಷಿಣ ಭಾರತದ ಮಂದಿ ತಮ್ಮ ವಾರಾಂತ್ಯ ಅಥವಾ ಬೇಸಿಗೆಯ ರಜಾದಿನಗಳನ್ನು ಕಳೆಯಲು ಅರಕು ಕಣಿವೆಗೆ ಭೇಟಿ ನೀಡಲು ಬಯಸುತ್ತಾರೆ. ಅರಕು ಕಣಿವೆಯು ಪ್ರಕೃತಿಯ ಮಡಿಲಿನಲ್ಲಿ ಉಳಿಯಲು ಬಯಸುವವರಿಗೆ ಸೂಕ್ತವಾದ ತಾಣವಾಗಿದೆ.

ಬಾದಾಮಿ ಗುಹೆಗಳು

ಬಾದಾಮಿ ಗುಹೆಗಳು ಕರ್ನಾಟಕದ ಐತಿಹಾಸಿಕ ಆಕರ್ಷಣೆಯಾಗಿದೆ. ನಮ್ಮಲ್ಲಿ ಬಹುತೇಕರು ಬಾದಾಮಿ ಗುಹೆಗಳನ್ನು ನೋಡಿರುವುದಿಲ್ಲ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಗುಹೆಗಳು ಮನೋಹರವಾದ ಗುಹೆಗಳಿಗೆ ನೆಲೆಯಾಗಿದೆ. ಇವುಗಳು ಗುಹಾ ದೇವಾಲಯವಾಗಿದ್ದು, ಮೃದುವಾದ ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ.

ತನ್ನ ಸಂಕೀರ್ಣವಾದ ಕೆತ್ತನೆಗಳು ವಿಶ್ವದ ಇತಿಹಾಸಕಾರರನ್ನು ಆಕರ್ಷಿಸುತ್ತದೆ. ಇಲ್ಲಿ ಹಿಂದೂ, ಜೈನ ಆಲಯಗಳನ್ನು ನೀವು ಕಾಣಬಹುದು. ಇವೆಲ್ಲವು ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದ ಪ್ರಮುಖವಾದ ಉದಾಹರಣೆಯಾಗಿವೆ. ಕರ್ನಾಟಕದ ಗುಪ್ತ ರತ್ನಗಳಲ್ಲಿ ಈ ಬಾದಾಮಿ ಗುಹೆಗಳು ಕೂಡ ಒಂದಾಗಿದೆ.

ವರ್ಕಲಾ ಬೀಚ್

ಕೇರಳದ ಮತ್ತೊಂದು ಗುಪ್ತರತ್ನವಾಗಿರುವ ತಾಣವೆಂದರೆ ಅದು ವರ್ಕಲಾ. ವರ್ಕಲಾದ ಕಡಲತೀರವು ಸುಂದರವಾದ ಬಂಡೆಗಳನ್ನು ಹೊಂದಿದ್ದು, ವಾರಾಂತ್ಯದ ಸಮಯದಲ್ಲಿ ಅತ್ಯುತ್ತಮವಾದ ವಿಹಾರ ತಾಣವಾಗಿದೆ. ಅಲ್ಲದೆ, ವರ್ಕಲಾ ಬೀಚ್ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

ಇಲ್ಲಿ 2000 ವರ್ಷಗಳಷ್ಟು ಪುರಾತನ ಜನಾರ್ಧನ ಸ್ವಾಮಿ ದೇವಾಲಯವು ಕೂಡ ಇದೆ. ವರ್ಕಲಾದಲ್ಲಿ ನೀವು ಕೇರಳ ಶೈಲಿಯ ಸಮುದ್ರಾಹಾರಗಳನ್ನು ಸವಿಯಲು ಹಲವಾರು ರೆಸ್ಟೋರೆಂಟ್ಗಳು, ಹೋಟೆಲ್ಗಳು ಇವೆ.