ಯೋಗರಾಜ್ ಭಟ್ ಸಿನಿಮಾದಲ್ಲಿ ಕೆಲಸ ಮಾಡಿದ್ದು ನನ್ನ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು ಎಂದು ಶರ್ಮಿಳಾ ಮಾಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ನಿರ್ದೇಶಕರ ಹಿಂದಿನ ಚಿತ್ರ ಗಾಳಿಪಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು, ಆದರೆ ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈ ಅವಕಾಶ ಗಾಳಿಪಟ 2 ಸಿನಿಮಾದಲ್ಲಿ ಸಿಕ್ಕಿತು, ಈ ಸಿನಿಮಾದ ಭಾಗವಾಗಿರಲು ನಾನು ಖುಷಿಯಾಗಿದ್ದೇನೆ ಎಂದಿದ್ದಾರೆ.
ನಾನು ಈ ಸಿನಿಮಾದಲ್ಲಿ ಟೀಚರ್, ಪವನ್ ಕುಮಾರ್ ನನ್ನ ಸ್ಟೂಡೆಂಟ್, ನಾನು ನಿಜ ಜೀವನದಲ್ಲಿ ಪವನ್‌ಗಿಂತ ವಯಸ್ಸಿನಲ್ಲಿ ಚಿಕ್ಕವಳು, ಪವನ್ ಚಿಕ್ಕವರಾಗಿ ಕಾಣುವಂತೆ ಮಾಡುವುದು ಸವಾಲಾಗಿತ್ತು. ಅವರು ಬಹಳ ಶ್ರಮ ವಹಿಸಿ ವರ್ಕೌಟ್ ಮಾಡಿದ್ದಾರೆ. ನನ್ನ ವಿದ್ಯಾರ್ಥಿಯಂತೆ ಕಾಣಲು ಸಾಕಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಶರ್ಮಿಳಾ ತಿಳಿಸಿದ್ದಾರೆ.
ಸಾಕಷ್ಟು ಪಾತ್ರಗಳಿದ್ದರೂ, ಪ್ರತಿಯೊಂದು ಪಾತ್ರವೂ ಸರಿಹೋಗುವಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ. ಯೋಗರಾಜ್ ಭಟ್ ಅವರಲ್ಲಿ ನನಗೆ ಇಷ್ಟವಾದ ಒಂದು ವಿಷಯವೆಂದರೆ ಅವರು ನಾಯಕಿಯರನ್ನು ಸುಂದರವಾದ ಗೊಂಬೆಗಳಂತೆ ತೋರಿಸುವುದಿಲ್ಲ. ಅವರು ತಮ್ಮ ಪಾತ್ರಗಳಿಗೆ ಹೆಚ್ಚಿನ ಮೌಲ್ಯವನ್ನು ಸೇರಿಸುತ್ತಾರೆ.
ಯೋಗರಾಜ್ ಭಟ್ ನಿಜವಾದ ಅರ್ಥದಲ್ಲಿ ‘ಹಡಗಿನ ಕ್ಯಾಪ್ಟನ್’ ಮತ್ತು ಅವರು ನಮ್ಮ ಪಾತ್ರವನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಾರೆ. ಜೊತೆಗೆ ಇಡೀ ತಂಡವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ವ್ಯಕ್ತಿಯಾಗಿದ್ದಾರೆ. ಇಡೀ ಶೂಟಿಂಗ್ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಗಾಳಿಪಟ-2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದೂದ್‌ಪೇಡಾ ದಿಗಂತ್ ಹಾಗೂ ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್ ನಾಗ್, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.