ಬೆಳಗಾವಿ: ಬೆಳಗಾವಿ ನಗರದ ಅಳ್ವಾನ್ ಗಲ್ಲಿಯಲ್ಲಿ ನಡೆದ ಗುಂಪು ಘರ್ಷಣೆ ಸಂಬಂಧ ಶಹಾಪುರ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಮುಸ್ಲಿಮ್ ಮತ್ತು ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಲಾಗಿದೆ.
ತಲ್ವಾರ್ ಪ್ರದರ್ಶನ, ಕಲ್ಲು ತೂರಾಟ ಸಂಬಂಧ ಐಪಿಸಿ ಸೆಕ್ಷನ್ (IPC Sections) 143, 147, 148, 323, 324, 307, 354, 504, 506, 153A, 149 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 13 ಹಿಂದೂ ಯುವಕರ ಮೇಲೂ ಐಪಿಸಿ ಸೆಕ್ಷನ್ 143, 147, 148, 323, 324, 307, 354, 504, 506, 153A ಹಾಗೂ 149ರಡಿ ಪ್ರಕರಣ ದಾಖಲಿಸಲಾಗಿದೆ.
ಈ ಮಧ್ಯೆ, ಎರಡೂ ಗುಂಪುಗಳ ತಲಾ ಐವರನ್ನು ಪೊಲೀಸರು ಬಂಧಿಸಿದ್ದಾರೆ. ತಲ್ವಾರ್ ಎಸೆದ ಆರೋಪ ಎದುರಿಸುತ್ತಿರುವ ಅಬ್ದುಲ್ ಎಂಬಾತನನ್ನೂ ಬಂಧಿಸಲಾಗಿದೆ.
ಬೆಳಗಾವಿಯ ಅಳ್ವಾನ್ನ ಆದರ್ಶ ಮರಾಠ ವಿದ್ಯಾಮಂದಿರ ಶಾಲೆ ಗ್ರೌಂಡ್ ನಲ್ಲಿ ಗುರುವಾರ ಸಂಜೆ 4.30ಕ್ಕೆ ಅಪ್ರಾಪ್ತರು ಕ್ರಿಕೆಟ್ ಆಟ ಆಡಿದ್ದರು. ನಂತರ ಗೆದ್ದ ತಂಡದ ಮೇಲೆ ಮತ್ತೊಂದು ತಂಡದಿಂದ ಹಲ್ಲೆ ನಡೆದಿತ್ತು. ಘರ್ಷಣೆ ಮುಂದುವರಿದು ಸಂಜೆ 6 ಗಂಟೆಗೆ ಒಂದು ಯುವಕರ ಗುಂಪು ಕಲ್ಲು ತೂರಾಟ ಮಾಡಿತ್ತು. ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕಲ್ಲು ತೂರದಂತೆ ಅಳ್ವಾನ್ ಗಲ್ಲಿ ನಿವಾಸಿಗಳು ಎಚ್ಚರಿಕೆ ನೀಡಿದ್ದರು.
ಸಂಜೆ 6.15ಕ್ಕೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಸ್ಥಳಕ್ಕೆ ಆಗಮಿಸಿದರು. ಪೊಲೀಸ್ ಜೀಪ್ನಲ್ಲಿ ಮಹಿಳಾ ಅಧಿಕಾರಿ ಆಗಮಿಸಿದ ವೇಳೆ ಯುವಕರ ಗುಂಪೊಂದು ತಲ್ವಾರ್ ಎಸೆದು ಅಲ್ಲಿಂದ ಕಾಲ್ಕಿತ್ತಿದೆ.
ಕಲ್ಲು ತೂರಾಟದ ವೇಳೆ 8 ಜನ ಗಾಯಗೊಂಡಿದ್ದು, ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಚಿಕಿತ್ಸೆ ಪಡೆದು ರಾತ್ರಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸಂಜೆ 7 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ನಂತರ ರಾತ್ರಿ 7.30ಕ್ಕೆ ಶಹಾಪುರ ಪೊಲೀಸ್ ಠಾಣೆ ಬಳಿ ಜನ ಜಮಾವಣೆಯಾಗಿದ್ದಾರೆ.
ಹಿಂದೂ ಮುಖಂಡರು, ಮಹಾನಗರ ಪಾಲಿಕೆ ಸದಸ್ಯರು ಭೇಟಿ ನೀಡಿದ್ದಾರೆ. ರಾತ್ರಿ 8 ಗಂಟೆಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಶಹಾಪುರ ಠಾಣೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ. ರಾತ್ರಿ 10 ಗಂಟೆ ಹೊತ್ತಿಗೆ ನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಘಟನೆ ಸಂಬಂಧ ರಾತ್ರಿ 12 ಗಂಟೆಗೆ ಶಹಾಪುರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.