ಬೆಳಗಾವಿ: ಬೆಲೆ ಏರಿಕೆಯ ವಿರುದ್ಧ ನಡೆಯುತ್ತಿದ್ದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ರಾಜಕೀಯ ಉಗ್ರತೆಯ ದೃಶ್ಯ ಉಂಟಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲೇ ಧಾರವಾಡದ ಹೆಚ್ಚುವರಿ ಎಸ್‌ಪಿ ನಾರಾಯಣ ಭರಮನಿಯವರ ಮೇಲೆ ಸಿಟ್ಟುಗೊಂಡ ಘಟನೆ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಇಂದು ಸಂಭವಿಸಿದೆ.
ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಮುಖ ಭಾಷಣ ನೀಡುತ್ತಿದ್ದ ಸಂದರ್ಭದಲ್ಲಿ, ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪು ಪಟ್ಟಿಗಳನ್ನು ಧರಿಸಿ ಪ್ರತಿಭಟಿಸಿದರು. ತಮ್ಮ ಭಾಷಣವನ್ನು ನಡುಮಟ್ಟಲ್ಲಿ ನಿಲ್ಲಿಸಿದ ಸಿಎಂ, ಈ ಅನಿರೀಕ್ಷಿತ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ಪ್ರಕಾರ, ಕಾಂಗ್ರೆಸ್‌ನ ನೇತೃತ್ವದ ಸಮಾವೇಶದಲ್ಲಿ ಮೊದಲಿನಿಂದಲೇ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಹಾಜರಿದ್ದರು. ಇತರ ನಾಯಕರ ಭಾಷಣದ ವೇಳೆ ಶಾಂತವಾಗಿದ್ದ ಅವರು, ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಮಾತನಾಡಲು ಆರಂಭಿಸಿದ ನಂತರ ಕಪ್ಪು ಪಟ್ಟಿಯನ್ನು ತೋರಿಸಿ ಪ್ರತಿಭಟಿಸಿದರು. ಈ ಘಟನೆಗೆ ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದ ಸಿಎಂ, ವೇದಿಕೆಯಲ್ಲಿ ನಿಂತಲ್ಲೇ “ಯಾರು ಇಲ್ಲಿ ಎಸ್‌ಪಿ? ಏನು ಮಾಡ್ತಾ ಇದ್ದೀರಿ?” ಎಂದು ಪ್ರಶ್ನಿಸಿ ಕೈ ಎತ್ತಿ ಸಿಟ್ಟು ಹೊರಹಾಕಿ, ಹೆಚ್ಚುವರಿ ಎಸ್‌ಪಿ ನಾರಾಯಣ ಭರಮನಿ ವೇದಿಕೆಗೆ ಬರುವಂತೆ ಕರೆದ ಸಿಎಂ, ಸಾರ್ವಜನಿಕವಾಗಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಸಚಿವ ಎಮ್.ಬಿ. ಪಾಟೀಲ್ ಅವರು ವೇದಿಕೆಗೆ ಬಂದು ಸಿಎಂ ಸಿದ್ದರಾಮಯ್ಯರನ್ನು ಸಮಾಧಾನ ಮಾಡುವ ಪ್ರಯತ್ನಿಸಿದರು. ಅವರು ಸಿಎಂ ಅನ್ನು ಸಮಾಧಾನಪಡಿಸಿ ಕಾರ್ಯಕ್ರಮವನ್ನು ಮುಂದುವರಿಸಲು ಸಹಾಯ ಮಾಡಿದರು.














