ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಗೆ ಮನೆ ಗೋಡೆ ಕುಸಿದು ಮೂರು ವರ್ಷದ ಮಗು ದುರ್ಮರಣಕ್ಕೀಡಾದ ದಾರುಣ ಘಟನೆ ಗೋಕಾಕ್ ನಗರದ ಮಹಲಿಂಗೇಶ್ವರ ಕಾಲೋನಿಯಲ್ಲಿ ಇಂದು ಸೋಮವಾರ ಮುಂಜಾನೆ ನಡೆದಿದೆ.
ಮೃತಪಟ್ಟ ಮಗು ಕೀರ್ತಿ ನಾಗೇಶ್ ಪೂಜಾರಿ (ವಯಸ್ಸು 3) ಎಂದು ತಿಳಿದು ಬಂದಿದೆ. ನಾಲ್ಕು ವರ್ಷದ ಅಕ್ಕ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಮಗು ಹಾಗೂ ಅವಳ ಅಕ್ಕ ರೂಮ್‌ನಲ್ಲಿ ಮಲಗಿದ್ದಾಗ ಮನೆಯ ಗೋಡೆ ಭಾರೀ ಮಳೆಯಿಂದ ಕುಸಿದು ಬಿದ್ದಿದೆ. ಪರಿಣಾಮವಾಗಿ ಕೀರ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಅಕ್ಕ ಗಂಭೀರ ಗಾಯಗೊಂಡಿದ್ದಾಳೆ. ಮನೆಯ ಇನ್ನೊಂದು ಕೋಣೆಯಲ್ಲಿ ಮಗುನ ತಂದೆ – ತಾಯಿ ಮಲಗಿದ್ದು, ಅವರಿಗೆ ಯಾವುದೇ ಗಾಯವಾಗಿಲ್ಲ.
ಗಾಯಾಳು ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಗುವಿನ ಶವವನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಘಟನಾ ಸ್ಥಳಕ್ಕೆ ಗೋಕಾಕ್ ಶಹರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.















