ಮನೆ ರಾಜ್ಯ ಬೆಳಗಾವಿ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ: ಸಿಎಂ ಬೊಮ್ಮಾಯಿ

ಬೆಳಗಾವಿ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ: ಸಿಎಂ ಬೊಮ್ಮಾಯಿ

0

ಬೆಳಗಾವಿ (Belgaum): ಕಿತ್ತೂರು ಕರ್ನಾಟಕದಲ್ಲಿ ಬೆಳಗಾವಿ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಟಿಳಕವಾಡಿಯ ಮಿಲೇನಿಯಂ ಗಾರ್ಡನ್ ಹತ್ತಿರ ತೆರೆದ ‘ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌’ ಬೃಹತ್‌ ಜವಳಿ ಷೋರೂಂ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೆರೆಯ ಮಹಾರಾಷ್ಟ್ರ ಹಾಗೂ ಗೋವಾದೊಂದಿಗೆ ಬೆಳಗಾವಿ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾದ ಅವಕಾಶಗಳಿವೆ. ಹೀಗಾಗಿ ಕೈಗಾರಿಕಾ ಟೌನ್‌ಶಿಪ್ ಘೋಷಿಸಿದ್ದೇವೆ. ನಗರಕ್ಕೆ ರೈಲ್ವೆ ಸಂಪರ್ಕ ವ್ಯವಸ್ಥೆ ಸುಧಾರಿಸಲಾಗುತ್ತಿದೆ. ಬೆಳಗಾವಿ–ಚನ್ನಮ್ಮ ಕಿತ್ತೂರು–ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಇರುವ ಭೂಸ್ವಾಧೀನ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.

ಇಂದು ಹಲವು ಜವಳಿ ಸಂಸ್ಥೆಗಳು ಬ್ರ್ಯಾಂಡ್‌ ನೇಮ್‌ಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿವೆ. ಆದರೆ, ಚನ್ನಬಸಪ್ಪ ಆ್ಯಂಡ್ ಸನ್ಸ್‌ ಉತ್ತಮ ಸೇವೆ, ಪರಿಶ್ರಮದಿಂದ ನೈಜವಾಗಿ ಬ್ರ್ಯಾಂಡ್‌ ನೇಮ್‌ ಆಗಿ ಬೆಳೆದಿದೆ. 8 ದಶಕಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ ಎಂದು ಶ್ಲಾಘಿಸಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಅರಣ್ಯ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ಲಕ್ಷ್ಮಿ ಹೆಬ್ಬಾಳಕರ, ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಚೇರ್ಮನ್‌ ವಿಜಯ ಸಂಕೇಶ್ವರ, ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌ ನಿರ್ದೇಶಕರಾದ ಬಿ.ಸಿ.ಶಿವಕುಮಾರ್‌, ಬಿ.ಸಿ.ಚಂದ್ರಶೇಖರ ಉಪಸ್ಥಿತರಿದ್ದರು.

ಹಿಂದಿನ ಲೇಖನಏಕನಾಥ್ ಶಿಂಧೆ ಬಣಕ್ಕೆ ಜಿಗಿದ ಮತ್ತೊಬ್ಬ ಸಚಿವ: ಠಾಕ್ರೆ ಜೊತೆ ಉಳಿದರುವ ಏಕಮಾತ್ರ ಸಚಿವ ಮಗ ಆದಿತ್ಯ ಠಾಕ್ರೆ
ಮುಂದಿನ ಲೇಖನವಾಣಿ ವಿಲಾಸ, ಗಾಯಿತ್ರಿ ಜಲಾಶಯಕ್ಕೆ ಭೇಟಿ ನೀಡಿದ ಯದುವೀರ್‌, ತ್ರಿಷಿಕಾ ಕುಮಾರಿ