ಬೆಳಗಾವಿ: ಬೆಳಗಾವಿ ಜಿಲ್ಲೆಯ ಸಂತಿ ಬಸ್ತವಾಡ ಗ್ರಾಮದಲ್ಲಿ ಪವಿತ್ರ ಕುರಾನ್ಗೆ ಬೆಂಕಿ ಹಚ್ಚಿದ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ನಗರದಲ್ಲಿ ಭಾರೀ ಮಟ್ಟದ ಪ್ರತಿಭಟನೆ ನಡೆಯಿತು. ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿರುವ ಮುಸ್ಲಿಂ ಸಮುದಾಯದ ನೂರಾರು ಪ್ರತಿಭಟನಾಕಾರರು ನ್ಯಾಯದ ಪಟ್ಟು ಹಿಡಿದು ಧ್ವನಿಸಿದರು.
ಪ್ರತಿಭಟನಾಕಾರರು ತ್ರಿವರ್ಣ ಧ್ವಜ ಹಿಡಿದು, ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು, “ಕುರಾನ್ ರಕ್ಷಣೆ ನಮ್ಮೆಲ್ಲರ ಕರ್ತವ್ಯ” ಎಂಬ ಘೋಷಣೆಗಳನ್ನು ಹಾಕಿದರು. ಪವಿತ್ರ ಗ್ರಂಥ ಕುರಾನ್ ಸುಟ್ಟಿರುವುದು ನಮ್ಮ ಧರ್ಮದ ಮೇಲೆ ದಾಳಿ ಎಂದೆನೆದು, ಅದರ ಹಿನ್ನಲೆಯಲ್ಲಿ ಪೀಡಿತ ಭಾವನೆಗಳು ವ್ಯಾಪಕವಾದವು.
ಕುರಾನ್ ಸುಟ್ಟವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಆಸೀಫ್ ಸೇಠ್ ಮತ್ತು ಇತರ ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಆಸೀಫ್ ಸೇಠ್, ಮೂರು ದಿನದ ಹಿಂದೆ ಸಂತಿ ಬಸ್ತವಾಡದಲ್ಲಿ ಕೆಟ್ಟ ಘಟನೆ ಆಗಿದೆ. ಕ್ರಿಮಿನಲ್ಗಳು ಕುರಾನ್ ಸುಟ್ಟು ಹಾಕಿದ್ದಾರೆ. ಕೆಟ್ಟ ಘಟನೆಯನ್ನು ಯಾರಿಂದಲೂ ಸಹಿಸಲು ಆಗಲ್ಲ. ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ ಅಂತ ಜಿಲ್ಲಾಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯ ಮಧ್ಯದಲ್ಲಿ ನಿರ್ವಹಣೆಗೆ ಬಂದಿದ್ದ ಪೊಲೀಸರಿಗೆ ಚಪ್ಪಲಿ ಎಸೆದ ಘಟನೆ ನಡೆದಿದೆ. ಕೆಲವು ಪ್ರತಿಭಟನಾಕಾರರು ತಮ್ಮ ಕೋಪವನ್ನು ಪೊಲೀಸ್ ಸಿಬ್ಬಂದಿಯ ಮೇಲೆ ವ್ಯಕ್ತಪಡಿಸಿ, ಗಲಾಟೆಗೆ ಕಾರಣವಾಗಿದ್ದು, ಕೆಲ ಹೊತ್ತಿಗೆ ಸ್ಥಳದಲ್ಲಿ ಗೊಂದಲ ಉಂಟಾಯಿತು. ಕೂಡಲೇ ಹೆಚ್ಚುವರಿ ಬಲವನ್ನು ಕಳುಹಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
“ನಿರ್ಲಕ್ಷ್ಯ ತೋರಿದ ಇನ್ಸ್ಪೆಕ್ಟರ್ ಕೂಡ ಅಮಾನತು ಆಗಿದ್ದಾರೆ. ಪೊಲೀಸರು ಒಂದು ವಾರ ಸಮಯ ಕೇಳಿದ್ದಾರೆ. ಪೊಲೀಸರಿಗೆ ಸಮಯ ಕೊಡೋಣ. ಒಂದು ವೇಳೆ ವಾರದೊಳಗೆ ಆರೋಪಿಗಳ ಬಂಧನ ಆಗದಿದ್ದರೆ ಸಮಾಜದ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದರು.














