ಮನೆ ರಾಜ್ಯ ಬೆಳಗಾವಿ ಚಳಿಗಾಲದ ಅಧಿವೇಶನ; ಆಡಳಿತ ಪಕ್ಷ v/s ವಿಪಕ್ಷಗಳ ಮಧ್ಯೆ ಫೈಟ್

ಬೆಳಗಾವಿ ಚಳಿಗಾಲದ ಅಧಿವೇಶನ; ಆಡಳಿತ ಪಕ್ಷ v/s ವಿಪಕ್ಷಗಳ ಮಧ್ಯೆ ಫೈಟ್

0

ಬೆಳಗಾವಿ : ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಧಿವೇಶನಕ್ಕೆ ಕುಂದಾನಗರಿ ಸಜ್ಜಾಗಿದೆ. ಚಳಿಗಾಲದ ಅಧಿವೇಶನ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ಡಿಸೆಂಬರ್ 19 ವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ ಸಾಧ್ಯತೆಯಿದೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ-ಜೆಡಿಎಸ್ ದೋಸ್ತಿಗಳು ಸಜ್ಜಾಗಿವೆ. ವಿಪಕ್ಷಗಳ ಅಸ್ತ್ರಗಳನ್ನು ಎದುರಿಸಲು ಸರ್ಕಾರ ಕೂಡ ರೆಡಿಯಾಗಿದೆ. ಸಿಎಂ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿರುವ ಹಿನ್ನೆಲೆ ಅಧಿವೇಶನದಲ್ಲಿ ಅವಿಶ್ವಾಸ ನಿಲುವಳಿ ಮಂಡನೆಗೆ ವಿಪಕ್ಷ ಬಿಜೆಪಿ ಚಿಂತಿಸಿತ್ತು. ಆದರೆ, ಈಗ ತನ್ನ ನಿರ್ಧಾರದಿಂದ ಕಮಲಪಡೆ ಹಿಂದೆ ಸರಿದಿದೆ.

ಬದಲಾದ ರಾಜಕೀಯ ಸನ್ನಿವೇಶ, ಸರ್ಕಾರದ ವಿವಾದಾತ್ಮಕ ನಡೆಗಳು ಮತ್ತು ಉತ್ತರ ಕರ್ನಾಟಕದ ಜನರ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಈ ಅಧಿವೇಶನ ವಿಶೇಷ ಗಮನ ಸೆಳೆಯುತ್ತಿದೆ. ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಲಿದೆ. ಸಂತಾಪದ ಬಳಿಕ ಕಲಾಪವನ್ನು ಮುಂದೂಡಲು ಸ್ಪೀಕರ್ ತೀರ್ಮಾನಿಸಿದ್ದಾರೆ. ಬಿಜೆಪಿ-ಜೆಡಿಎಸ್ ಪಕ್ಷಗಳು ಈಗಾಗಲೇ ಈಗ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿವೆ.

ಹಂತಹಂತವಾಗಿ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತೀವ್ರ ಒತ್ತಡಕ್ಕೆ ಸಿಲುಕಿಸುವ ಯೋಜನೆ ರೂಪಿಸಲಾಗಿದೆ. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರವಾಗಲಿವೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ನೀಡಿದ್ದ ಭರವಸೆಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಸರ್ಕಾರದಿಂದ ಮಾಹಿತಿ ಕೋರಲಿವೆ ಎನ್ನಲಾಗಿದೆ.

ಕಾಂಗ್ರೆಸ್ ಶಾಸಕರಲ್ಲೇ ಮುಂದುವರಿದ ಬಣಗಾರಿಕೆ, ದಿಲ್ಲಿ ಯಾತ್ರೆ, ನಾಯಕತ್ವ ಬದಲಾವಣೆ ಚರ್ಚೆ, ಬ್ರೇಕ್‌ಫಾಸ್ಟ್-ಲಂಚ್-ಡಿನ್ನರ್ ಸಭೆಗಳ ಪ್ರಸ್ತಾಪ, ಇವೆಲ್ಲವೂ ಸರ್ಕಾರಕ್ಕೆ ಮುಜುಗರ ಉಂಟು ಮಾಡಲಿವೆ. ಪ್ರತಿಪಕ್ಷಗಳು ಈ ಒಳಗಿನ ಗೊಂದಲವನ್ನೂ ಆಯುಧವಾಗಿ ಬಳಸಿಕೊಳ್ಳಲಿವೆ.

ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಮೆಕ್ಕೆಜೋಳ, ಕಬ್ಬಿನ ಬೆಲೆ ನಿಗದಿ, ಹೆಸರು ಕಾಳು ಬೆಲೆ ಕುಸಿತವಾಗಿರುವುದು ರೈತರನ್ನು ಕಂಗೆಡಿಸಿದೆ. ಕಬ್ಬು ಬೆಳೆಗಾರರ ಪ್ರತಿಭಟನೆ ತಾತ್ಕಾಲಿಕವಾಗಿ ಶಮನವಾಗಿದ್ದರೂ, ಬೇಡಿಕೆ ಇನ್ನೂ ಪೂರ್ಣವಾಗಿ ಈಡೇರಿಲ್ಲ. ಹೀಗಾಗಿ, ಬಾಗಲಕೋಟೆ ಹಾಗೂ ಇತರ ಜಿಲ್ಲೆಗಳ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳ ನೇಮಕಾತಿಗಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇತ್ತೀಚೆಗೆ ಉದ್ಯೋಗ ಆಕಾಂಕ್ಷಿಗಳು ಹುಬ್ಬಳ್ಳಿ ಧಾರವಾಡದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು. ಅದರ ಪರಿಣಾಮ ಮತ್ತೆ ಬೆಳಗಾವಿಯಲ್ಲೂ ಪ್ರತಿಭಟನೆಯಾಗುವ ಸಾಧ್ಯತೆ ಇದೆ. ಇನ್ನು ಒಳಮೀಸಲಾತಿಯ ಗೊಂದಲಗಳು ಇನ್ನೂ ಜೀವಂತವಾಗಿವೆ.

ಹೀಗಾಗಿ, ಕೆಲವು ಪರಿಶಿಷ್ಟ ಸಮುದಾಯದ ಸಂಘಟನೆಗಳ ಪ್ರತಿಭಟನೆಯೂ ನಡೆಯುವ ಸಾಧ್ಯತೆ ಇದೆ. ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿಗಳ ದಿನಗೂಲಿ ನೌಕರರು ವೇತನ ಪರಿಷ್ಕರಣೆ ವೇತನ ಪಾವತಿಯಂತಹ ಸಮಸ್ಯೆಗಳಿಗಾಗಿ ಪ್ರತಿಭಟನೆ ನಡೆಸೋ ಸಾಧ್ಯತೆ ಇದೆ. ಇನ್ನು ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳು ಮತ್ತೊಮ್ಮೆ ತಗಾದೆ ತೆಗೆಯುವ ಆತಂಕವೂ ಇದೆ.