ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಲಂಚ ಕೇಳಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಅಂಗನವಾಡಿ ಸಹಾಯಕಿಯ ವರ್ಗಾವಣೆಗೆ 30 ಸಾವಿರ ರೂಪಾಯಿ ಲಂಚ ಕೇಳಿದ ಆರೋಪದ ಮೇರೆಗೆ ಬೆಳಗಾವಿಯ ಅಧಿಕಾರಿ ಹಾಗೂ ಸಿಬ್ಬಂದಿ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಪರಿಂಟೆಂಡೆಂಟ್ ಅಬ್ದುಲ್ ವಲಿ ಹಾಗೂ ಕಂಪ್ಯೂಟರ್ ಆಪರೇಟರ್ ಸೌಮ್ಯಾ ಬಡಿಗೇರ್ ಅವರೇ ಲಂಚ ಬೇಡಿದವರು. ಈ ಇಬ್ಬರು, ಹುಕ್ಕೇರಿ ತಾಲ್ಲೂಕಿನ ಅಂಗನವಾಡಿ ಸಹಾಯಕಿ ಶಕುಂತಲಾ ಕಾಂಬ್ಳೆ ಅವರ ವರ್ಗಾವಣೆಗೆ 30 ಸಾವಿರ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಅಂಗನವಾಡಿ ಸಹಾಯಕಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅಂಗನವಾಡಿ ಸಹಾಯಕಿಯಿಂದ ಅಧಿಕಾರಿಗಳು 15 ಸಾವಿರ ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ಆಗುತ್ತಿದ್ದಂತೆ ಕಂಪ್ಯೂಟರ್ ಆಪರೇಟರ್ ಸೌಮ್ಯಾ ಅಸ್ವಸ್ಥರಾಗಿದ್ದು, ತಕ್ಷಣವೇ ಕಚೇರಿಗೆ ವೈದ್ಯರನ್ನ ಕರೆಸಿ ಚಿಕಿತ್ಸೆ ಕೊಡಿಸಲಾಗಿದೆ. ಹಣ ಪಡೆದಿದ್ದ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.














