ಮನೆ ಅಪರಾಧ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವಂಚನೆ ಪ್ರಕರಣ: ಮೂವರ ಬಂಧನ

ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವಂಚನೆ ಪ್ರಕರಣ: ಮೂವರ ಬಂಧನ

0

ಮಂಗಳೂರು(ದಕ್ಷಿಣ ಕನ್ನಡ): ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ವಂಚನೆ ಮಾಡಿದ ಪ್ರಕರಣವನ್ನು ಭೇದಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರಾ ಬಾಯಿ ಸಿ.ಆರ್.(23), ಹಾಸನದ ಹಳಸಿನಹಳ್ಳಿಯ ಸೌಂದರ್ಯಾ ಎಂ.ಎಸ್.(21) ಮತ್ತು ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್ ಕುಮಾರ್ ನಾಯ್ಕ(19) ಎಂದು ಗುರುತಿಸಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿವಿಧ ಪತ್ರಿಕೆಗಳಲ್ಲಿ ಕರಾವಳಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಚೇರಿ ಕೆಲಸ ಖಾಲಿ ಇದೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುದಾಗಿ ಬಂದ ಜಾಹೀರಾತು ನೋಡಿದ ಕೆಲವರು ಜಾಹೀರಾತಿನಲ್ಲಿ ನಮೂದಿಸಿದ ಫೋನ್ ನಂಬರ್ ಗೆ ಕರೆ ಮಾಡಿ ವಿಚಾರಿಸಿದರು. ಅವರು ಕರೆಯನ್ನು ಸ್ವೀಕರಿಸಿ ನೀವು ಕೆಲಸಕ್ಕೆ ಸೇರ ಬಯಸಿದರೆ ಫೀಸ್ ಕೊಡ್ಬೇಕು ಎಂಬುದಾಗಿ ತಿಳಿಸಿದ್ದರು.

ಅಂತೆಯೇ, ಕಳೆದ ಸುಮಾರು 7 ತಿಂಗಳಿನಿಂದ ಪದೇ ಪದೇ ಆನ್ ಲೈನ್ ಮುಖಾಂತರ ಹಣವನ್ನು ಪಾವತಿ ಮಾಡುವಂತೆ ತಿಳಿಸಿದ್ದರು. ಅದರಂತೆ ಗೂಗಲ್ ಪೇ ಮುಖಾಂತರ ಇದುವರೆಗೆ ಸುಮಾರು ಒಟ್ಟು 2,25,001 ರೂಪಾಯಿಯನ್ನು ಆರೋಪಿಗಳ ಖಾತೆಗೆ ಪಾವತಿ ಮಾಡಿದ್ದರು. ಇದಾದ ಬಳಿಕವೂ ಆರೋಪಿಗಳು ಪದೇ ಪದೇ ಕರೆ ಮಾಡಿ ಇನ್ನೂ ಹಣವನ್ನು ನೀಡಬೇಕು ಎಂದು ಹೇಳಿ ಕೆಲಸ ಕೊಡುವುದಾಗಿ ನಂಬಿಸಿ ಯಾವುದೇ ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.