ಬೆಂಗಳೂರು(Bengaluru): ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣಕ್ಕೆ (Bellandur denotification case) ಸಂಬಂಧಿಸಿದಂತೆ ಬೆಂಗಳೂರಿನ ವಿಚಾರಣಾ ನ್ಯಾಯಾಲಯವು ನೀಡಿರುವ ಸಮನ್ಸ್ ಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್ ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(B.S.Yadiyoorappa) ಮೊರೆ ಹೋಗಿದ್ದಾರೆ.
ಪ್ರಕರಣದ 2ನೇ ಆರೋಪಿಯಾಗಿರುವ ಯಡಿಯೂರಪ್ಪ ಅವರನ್ನು ಏಪ್ರಿಲ್ 19 ರಂದು ವಿಚಾರಣೆಗೆ ಹಾಜರಾಗುವಂತೆ ವಿಚಾರಣಾ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿತ್ತು.
ಐ.ಟಿ ಕಾರಿಡಾರ್ ನಿರ್ಮಾಣಕ್ಕಾಗಿ ಬೆಂಗಳೂರಿನ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪ ಸಂಬಂಧ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಏಪ್ರಿಲ್ 19ರಂದು ಖುದ್ದು ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.
ನ್ಯಾಯಾಧೀಶ ಬಿ. ಜಯಂತ್ ಕುಮಾರ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13(1)(ಡಿ) ಮತ್ತು 13(2)ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಮನ್ಸ್ ಜಾರಿ ಮಾಡಿದ್ದರು.
2013ರಲ್ಲಿ ವಾಸುದೇವ ರೆಡ್ಡಿ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿರುವ ವಿಶೇಷ ನ್ಯಾಯಾಲಯ, ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿ ವಿಚಾರಣಾ ಪ್ರಕ್ರಿಯೆ ಕೈಗೆತ್ತಿಕೊಂಡಿತ್ತು.
ಐ.ಟಿ. ಕಾರಿಡಾರ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಪೈಕಿ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಮಾಜಿ ಸಿಎಂ ಬಿಎಸ್ ವೈ ಮೇಲಿದೆ.