ಮನೆ ರಾಜ್ಯ ಬಳ್ಳಾರಿ ಏರ್‌ ಪೋರ್ಟ್ ಆದರೆ ಅದಕ್ಕೆ ಶ್ರೀ ಹನುಮಾನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಅಂತ...

ಬಳ್ಳಾರಿ ಏರ್‌ ಪೋರ್ಟ್ ಆದರೆ ಅದಕ್ಕೆ ಶ್ರೀ ಹನುಮಾನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಅಂತ ನಾಮಕರಣ ಮಾಡಲಿ: ಜನಾರ್ದನ ರೆಡ್ಡಿ

0

ಬೆಳಗಾವಿ: ಬಳ್ಳಾರಿ ಏರ್‌ ಪೋರ್ಟ್ ಆದರೆ ಅದಕ್ಕೆ ಶ್ರೀ ಹನುಮಾನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಅಂತ ನಾಮಕರಣ ಮಾಡಲಿ ಅಂತಾ ನನ್ನ ಆಸೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಏರ್ ಬಸ್​ ಗಳು ಇವತ್ತು ಬರುತ್ತಿವೆ ಅಂದರೆ ನಾನು ಮಾಡಿದ ಕೆಲಸ ಕಾರಣ. ದುರಾದೃಷ್ಟ ಅಂದರೆ ನಾನು ಹುಟ್ಟಿ ಬೆಳೆದ ಬಳ್ಳಾರಿಯಲ್ಲಿ ಇದುವರೆಗೆ ಏರ್‌ ಪೋರ್ಟ್ ಆಗಿಲ್ಲ ಎಂದರು.

ವಿಜಯನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿ ನಾನು ಜೂವಾಲಾಜಿಕಲ್ ಪಾರ್ಕ್ ಕಟ್ಟಿದ್ದೆ. ಅಲ್ಲಿ ನೈಟ್ ಸಫಾರಿ, ಥೀಮ್ ಪಾರ್ಕ್, ಶ್ರೀಕೃಷ್ಣದೇವರಾಯನ ಪ್ರತಿಮೆಯನ್ನು ಇಂಗ್ಲೆಂಡಿನ ಲೇಡಿ ಲಿಬರ್ಟಿ ಪ್ರತಿಮೆ ತರಹ ಮಾಡಬೇಕೆಂಬ ಆಸೆ ಇತ್ತು. ತುಂಗಭದ್ರ ನದಿಯಲ್ಲಿ ಸೌಂಡ್ ಅಂಡ್ ಲೈಟ್ ಮಾಡಬೇಕೆಂಬ ಆಸೆ ಇತ್ತು. ಇವೆಲ್ಲಾ ಕನಸುಗಳನ್ನು 13-14 ವರ್ಷಗಳ ಹಿಂದೆಯೇ ನಾನು ಕಂಡಿದ್ದೆ. ಈಗಿನ ಸರ್ಕಾರ ಈ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದರು.

ಬಳ್ಳಾರಿಗೆ ಯಾರ್ಯಾರು ಏನೇನು ಕೆಲಸ ಮಾಡಿದ್ದಾರೆ ಅಂತ ಎದೆ ಮೇಲೆ ಕೈ ಇಟ್ಟು ಮಾತಾಡಲಿ. ರಾಜಕೀಯಕ್ಕಾಗಿ ವಿರೋಧ ಮಾಡುವವರು ಮಾಡಬಹುದು. ಅವರು ಮನೆಯಲ್ಲಿ ಹೋಗಿ ಬಳ್ಳಾರಿ ಅಭಿವೃದ್ಧಿಗೋಸ್ಕರ ಜನಾರ್ದನ ರೆಡ್ಡಿ ಕೆಲಸ ಮಾಡಿದ್ದಾನೋ ಇಲ್ಲವೋ ಅಂತಾ ದೇವರ ಮುಂದೆ ಕೇಳಿಕೊಳ್ಳಲಿ ಎಂದರು.

ನಾನು ಹೇಳಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ ಅದು ಅವರ ಕರ್ಮ. ನನ್ನ ವಿರುದ್ಧ ಗಣಿ ಕೇಸ್ ​ಗಳನ್ನು ಹಾಕಲಾಗಿದೆ. ನ್ಯಾಯಾಲಯ ಇದೆ, ನಾನು ಪ್ರಕರಣಗಳಿಗೆ ಹೆದರುವುದಿಲ್ಲ ಎಂದರು.

ಸರ್ಕಾರ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡಬೇಕು. ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ಸ್ಟೇಡಿಯಂ ಕಟ್ಟಬೇಕಿದೆ. ಸರ್ಕಾರ ಈ ವಿಷಯದಲ್ಲಿ ಗಮನ ಕೊಡಲಿ ಎಂದರು.

ಬಳ್ಳಾರಿಯಲ್ಲಿ ಮೈನಿಂಗ್ ಟ್ಯಾಕ್ಸ್ ​ನಿಂದ 17 ಸಾವಿರ ಕೋಟಿ ಸಂಗ್ರಹ ಆಗಿದೆ. ಈ‌ ಹಣ ಬಳ್ಳಾರಿ ಅಭಿವೃದ್ಧಿಗೆ ಬಳಕೆ ಮಾಡಬೇಕು ಅಂತ ಕೋರ್ಟ್ ಆದೇಶ ಆಗಿದೆ. ಇದರ ಬಗ್ಗೆ ಕೋರ್ಟಿನಲ್ಲಿ ಗಣಿ ಮಾಲೀಕರು 13 ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಈಗ ಆ ಹಣ 24 ಸಾವಿರ ಕೋಟಿ ಆಗಿದೆ. ಈ ಹಣದಿಂದ ಬಳ್ಳಾರಿ ಅಭಿವೃದ್ಧಿ ಮಾಡಬಹುದು ಎಂದರು.

ರಾಜ್ಯ ಸರ್ಕಾರದ ಮೇಲೆ‌ ಭಾರ ಹಾಕುವ ಬದಲು ಬಳ್ಳಾರಿ ಶಾಸಕರು ಬಳ್ಳಾರಿ ಅಭಿವೃದ್ಧಿಗೆ ಪ್ಲಾನ್ ಮಾಡಿ. ನನಗೆ ಕ್ರೆಡಿಟ್ ಕೊಡುವುದು ಬೇಡ. ನಿಮಗೆ ಒಳ್ಳೆಯದು ಮಾಡಿ ಅಂತ ಹೇಳುತ್ತಿದ್ದೇನೆ ಅಷ್ಟೆ. ನನಗೆ ಬಳ್ಳಾರಿಗೆ ಪ್ರವೇಶಕ್ಕೆ ಅವಕಾಶವೇ ಇಲ್ಲ, ನನಗೆ ಕ್ರೆಡಿಟ್ ಬೇಡ ಎಂದರು.

ಜನಾರ್ದನ ರೆಡ್ಡಿ ಮಾತಾಡುವಾಗ ಪದೇ ಪದೇ ಸಂಡೂರು ಶಾಸಕ ತುಕಾರಾಂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ನೀವು ನಂತರ ಮಾತನಾಡಿ ತನ್ನ ಪ್ರತೀ ಪಾಯಿಂಟ್​ ಗೂ ಉತ್ತರ ಕೊಡಿ ಎಂದು ತುಕಾರಾಂಗೆ ಹೇಳಿದ ಜನಾರ್ದನ ರೆಡ್ಡಿ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, “ಸುಮ್ನಿರಿ ತುಕಾರಾಂ, ರೆಡ್ಡಿಯವರಿಗೆ ಮಾತಾಡಲು ಬಿಡಿ” ಅಂತ ಗರಂ ಆದರು.

ಜನಾರ್ದನ ರೆಡ್ಡಿ ಮಾತನಾಡುವ ವೇಳೆ ಬಳ್ಳಾರಿ ಜಿಲ್ಲೆಯ ಶಾಸಕರಾದ ತುಕಾರಾಂ, ನಾರಾ ಭರತ್ ರೆಡ್ಡಿ ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಬಳ್ಳಾರಿ ಅಭಿವೃದ್ಧಿ ನಾವು ಮಾಡುತ್ತಿದ್ದೇವೆ, ಇನ್ನಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಹೇಳಿದರು.

ಬಳ್ಳಾರಿ ಅಭಿವೃದ್ಧಿ ಆಗಿಲ್ಲ ಎಂಬ ಹೇಳಿಕೆಗೆ ಜಿಲ್ಲೆಯ ಶಾಸಕರು ಗರಂ ಆದಾಗ, ನಾನು ಯಾರ ಹೆಸರನ್ನೂ ಉಲ್ಲೇಖ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳಿದರು. ನನ್ನ ವಿರುದ್ಧ ಕುತಂತ್ರ ಮಾಡಿದವರ ಹೆಸರನ್ನೂ ನಾನು ಹೇಳಲ್ಲ. ನನಗೆ ಮಾತಾಡಲು ಅವಕಾಶ ಕೊಡಿ, ತೊಂದರೆ ಮಾಡಬೇಡಿ ಎಂದರು.