ಮನೆ ದೇವಸ್ಥಾನ ಬೇಲೂರು: ವಿಜೃಂಭಣೆಯಿಂದ ಜರುಗಿದ ಚನ್ನಕೇಶವ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ

ಬೇಲೂರು: ವಿಜೃಂಭಣೆಯಿಂದ ಜರುಗಿದ ಚನ್ನಕೇಶವ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ

0

ಬೇಲೂರು (ಹಾಸನ): ಇಲ್ಲಿನ ಚನ್ನಕೇಶವ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

Join Our Whatsapp Group

ಬೆಳಿಗ್ಗೆ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ, ರಥದ ನಾಲ್ಕು ಚಕ್ರಗಳಿಗೆ ಅನ್ನಬಲಿ ನೀಡಿ ನಂತರ ದೇಗುಲದ ಒಳಗೆ ಯಾತ್ರಾದಾನ ಸೇವೆ ನಡೆಯಿತು.

ನಂತರ ಸೌಮ್ಯನಾಯಕಿ, ರಂಗನಾಯಕಿ ಸಮೇತ ದೇವರ ಉತ್ಸವ ಮೂರ್ತಿಯನ್ನು ದೇಗುಲದ ಗೋಪುರದ ಬಾಗಿಲಿನಿಂದ ಹೊರ ತಂದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು.

ಕೇಸರಿ ಮಂಟಪದಡಿ ಸೇವೆ ಸಲ್ಲಿಸಿ ರಥದಲ್ಲಿ ಕೂರಿಸಲಾಯಿತು. ನಂತರ ರಥ ನಿರೀಕ್ಷೆ, ಸಂಪ್ರೋಕ್ಷಣೆ, ಮಂಗಳಾರತಿ ನಡೆಸಿ, ರಥ ಮುಂಭಾಗ ಇರಿಸಿದ್ದ ಬಾಳೆಕಂದನ್ನು ಕತ್ತರಿಸಿ ರಥಕ್ಕೆ ಬಲಿ ಕೊಡಲಾಯಿತು.

ಸಂಪ್ರದಾಯದಂತೆ ದೊಡ್ಡಮೇದೂರಿನ ಮೌಲ್ವಿ ಸೈಯದ್ ಸಜ್ಜಾದ್ ಬಾಷಾ ಉರ್ದು ಭಾಷೆಯಲ್ಲಿ ದೇವರಿಗೆ ವಂದನೆ ಸಲ್ಲಿಸಿದರು.

ರಥವನ್ನು ಮೂಲಸ್ಥಾನದಿಂದ ಎಳೆದು ಗೋಪುರದ ಆಗ್ನೇಯ(ಭಸ್ಮಾಸುರ ಮೂಲೆ) ದಿಕ್ಕಿನಲ್ಲಿರುವ ಬಯಲು ರಂಗಮಂದಿರದ ಬಳಿ ತಂದು ನಿಲ್ಲಿಸಲಾಯಿತು.

ದೂರದ ಊರುಗಳಿಂದ ಬಂದಿದ್ದ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ರಥಕ್ಕೆ ಬಾಳೆಹಣ್ಣು ಅರ್ಪಿಸಿದರು. ಜನರ ಸಂಖ್ಯೆ ಹೆಚ್ಚಾಗಿದ್ದು, ರಥ ಸಾಗುತ್ತಿದ್ದಂತೆಯೇ ಜೈಕಾರ ಮುಗಿಲು ಮುಟ್ಟಿತು.

ಸಂಪ್ರದಾಯದಂತೆ ದೇವಸ್ಥಾನದ ಮೆಟ್ಟಿಲು ಬಳಿ ಮೇದೂರು ಖಾಜಿ ಸಾಹೇಬರಿಂದ ದೇವರಿಗೆ ವಂದನೆ (ಕುರಾನ್ ಪಠಣ) ಸಲ್ಲಿಸಲಾಯಿತು.

ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿತ್ತು. ನಂತರ ಧಾರ್ಮಿಕ ದತ್ತಿ ಇಲಾಖೆಯಿಂದ ಆಗಮ ಪಂಡಿತರು ಬಂದು ದಾಖಲೆಗಳನ್ನು ಪರಿಶೀಲಿಸಿದ್ದರು.‌ ಅವರ ವರದಿಯ ಆಧಾರದಲ್ಲಿ ದೇವಸ್ಥಾನದ ಮೆಟ್ಟಿಲುಗಳ ಬಳಿ ಕುರಾನ್ ಪಠಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ದೇಗುಲದ ವತಿಯಿಂದ, ಸಂಘ ಸಂಸ್ಥೆಗಳಿಂದ ಹಾಗೂ ಖಾಸಗಿ ವ್ಯಕ್ತಿಗಳಿಂದ ಮಜ್ಜಿಗೆ, ಪಾನಕ, ಉಪಾಹಾರವನ್ನು ನೀಡಲಾಯಿತು.

ಹಿಂದಿನ ಲೇಖನಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ: ಅನಿತಾ ಕುಮಾರಸ್ವಾಮಿ
ಮುಂದಿನ ಲೇಖನಕುಡಿದ ಅಮಲಿನಲ್ಲಿ 12ನೇ ಪತ್ನಿಯನ್ನು ಕೊಂದ ಪತಿ