ಮನೆ ಆರೋಗ್ಯ ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇರಿಸುವುದರಿಂದಾಗುವ ಪ್ರಯೋಜನಗಳು

ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇರಿಸುವುದರಿಂದಾಗುವ ಪ್ರಯೋಜನಗಳು

0

ಇತ್ತೀಚಿನ ದಿನಗಳಲ್ಲಿ ಅನೇಕರು ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು, ಕಾಯಿಲೆಗಳಿಂದ ದೂರವಾಗಿ ಸದೃಢರಾಗಿರಬೇಕೆಂದು ಸಿರಿಧಾನ್ಯದ ಬಳಕೆ ಮಾಡುತ್ತಿದ್ದಾರೆ. ಹಾಗಾದರೆ ಸಿರಿಧಾನ್ಯದಲ್ಲಿ ಯಾವೆಲ್ಲಾ ಧಾನ್ಯಗಳನ್ನು ಬಳಕೆ ಮಾಡುತ್ತಾರೆ ಇದರಿಂದ ಆರೋಗ್ಯಕ್ಕೇನು ಪ್ರಯೋಜನ ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

ಸಿರಿಧಾನ್ಯ

ಗೋಧಿ ಮತ್ತು ಅಕ್ಕಿಗೆ ಹೋಲಿಸಿದರೆ ಸಿರಿಧಾನ್ಯ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಏಕೆಂದರೆ ಸಿರಿಧಾನ್ಯದಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಜೊತೆಗೆ ಕಡಿಮೆ ಗ್ಲೈಸಮಿಕ್ ಅಂಶ ಇರುತ್ತದೆ. ಇದರಿಂದ ರಕ್ತಕ್ಕೆ ಸಕ್ಕರೆ ನಿಧಾನವಾಗಿ ಬಿಡುಗಡೆಯಾಗುತ್ತದೆ.

ಪ್ರೋಟೀನ್, ಬಿಟಮಿನ್, ಬಿ, ಕ್ಯಾಲ್ಸಿಯಂ, ಸತುವಿನ ಅಂಶ ಉತ್ತಮವಾಗಿರುತ್ತದೆ. ಹೀಗಾಗಿ ಸಿರಿಧಾನ್ಯದ ಬಳಕೆ ಒಳ್ಳೆಯದು ಎನ್ನುತ್ತಾರೆ.

ಮಧುಮೇಹಿಗಳಿಗೆ ಒಳ್ಳೆಯದು

ಸಿರಿಧಾನ್ಯ ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತಕ್ಕೆ ಸಕ್ಕರೆ ಪ್ರಮಾಣವನ್ನು ನಿಧಾನವಾಗಿಯೇ ಬಿಡುಗಡೆ ಮಾಡುತ್ತದೆ. ಹೀಗಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಅಲ್ಲದೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ 54-68. ಹೆಚ್ಚಿನ ಪ್ರಮಾಣದ ಆಹಾರದ ಫೈಬರ್, ಎಲ್ಲಾ ಅಗತ್ಯ ಅಮೈನೋ ಆಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳೊಂದಿಗೆ ಪ್ರೋಟೀನ್ಗಳೂ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.

ತೂಕ ಇಳಿಕೆಗೆ

ಸಿರಿಧಾನ್ಯದಲ್ಲಿ ವಿವಿಧ ರೀತಿಯ ಧಾನ್ಯಗಳಿರುತ್ತವೆ. ಅದರಲ್ಲಿ ರಾಗಿ ಕೂಡ ಇರುವುದರಿಂದ ದೇಹದಲ್ಲಿನ ಕೊಬ್ಬು ನಿವಾರಣೆಗೆ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ಸಿರಿಧಾನ್ಯವನ್ನು ಸೇವನೆ ಮಾಡುವುದರಿಂದ ಗಣನೀಯವಾಗಿ ತೂಕ ಇಳಿಕೆಯಾಗುತ್ತದೆ.

ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಕರುಳಿಗೆ ಸಂಬಂಧಿಸಿದ ಅನಾರೋಗ್ಯವನ್ನು ತಡೆಯಲು ಇದು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ

ಸಿರಿಧಾನ್ಯದಲ್ಲಿನ ಉತ್ಕರ್ಷಣ ನಿರೋಧಕಗಳು ಎಲ್ಡಿಎಲ್ ಕೊಲೆಸ್ಟ್ರಾಲ್, ಒಟ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ರಕ್ತನಾಳಗಳನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಬಹುದು. ಹೀಗಾಗಿ ಸಿರಿಧಾನ್ಯವನ್ನು ಸೇವನೆ ಮಾಡುತ್ತಾ ಬಂದರೆ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.

ಮಜ್ಜಿಗೆಯನ್ನು ಕುಡಿಯಲೇಬೇಕು

ಸಿರಿಧಾನ್ಯವನ್ನು ಸೇವನೆ ಮಾಡಿದಾಗ ಮಜ್ಜಿಗೆಯನ್ನು ತಪ್ಪದೇ ಕುಡಿಯಬೇಕು ಎನ್ನುತ್ತಾರೆ ವೈದ್ಯರು. ಏಕೆಂದರೆ ಸಿರಿಧಾನ್ಯ ದಡುವಾದ ಆಹಾರವಾದ್ದರಿಂದ ಕೆಲವರಿಗೆ ಅಜೀರ್ಣ, ಗ್ಯಾಸ್ಟ್ರಿಕ್, ಆಸಡಿಟಿ ಕಾಡುವ ಸಾಧ್ಯತೆ ಇರುತ್ತದೆ.ಹೀಗಾಗಿ ಸಿರಿಧಾನ್ಯವನ್ನು ಸೇವನೆ ಮಾಡಿದ ಬಳಿಕ ಮಜ್ಜಿಗೆಯ ಸೇವನೆ ಮಾಡಬೇಕು.