ಬೆಂಗಳೂರು(Bengaluru): ಹೊಲದ ಮನೆಯಲ್ಲಿ ಬಚ್ಚಿಟ್ಟಿದ್ದ 1,400 ಕೆ.ಜಿ ರಕ್ತಚಂದನವನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಗೋಣಿ ಚೀಲದಲ್ಲಿ ರಕ್ತಚಂದನದ ತುಂಡುಗಳನ್ನು ತಂದಿದ್ದ ಆರೋಪಿಗಳು, ಇಸ್ಕಾನ್ ದೇವಸ್ಥಾನ ಸಮೀಪದ ಜ್ಯೂಸ್ ಕಾರ್ಖಾನೆ ಬಳಿ ನಿಂತಿದ್ದರು. ಪರಿಚಯಸ್ಥ ಗ್ರಾಹಕರಿಗೆ ಮಾರಾಟ ಮಾಡಲು ಕಾಯುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಲಾಯಿತು ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ ತಿಳಿಸಿದರು.
ಆರಂಭದಲ್ಲಿ 11 ಕೆ.ಜಿ. ತೂಕದ ರಕ್ತಚಂದನದ ಎರಡು ತುಂಡುಗಳು ಮಾತ್ರ ಸಿಕ್ಕಿದ್ದವು. ಬಂಧಿತ ಆರೋಪಿಗಳ ವಿಚಾರಣೆ ನಡೆಸಿದಾಗ, ಆರೋಪಿಯೊಬ್ಬನ ಹೊಲದ ಮನೆಯಲ್ಲಿ ರಕ್ತಚಂದನದ ತುಂಡುಗಳು ಇರುವುದು ಗೊತ್ತಾಯಿತು.
ಹೊಲದ ಮನೆಗೆ ಹೋಗಿ ಶೋಧ ನಡೆಸಿದ ವಿಶೇಷ ತಂಡ, ಮತ್ತಷ್ಟು ರಕ್ತಚಂದನ ತುಂಡುಗಳನ್ನು ಜಪ್ತಿ ಮಾಡಿದೆ. ಒಟ್ಟು 1,400 ಕೆ.ಜಿ ರಕ್ತಚಂದನ ಸಿಕ್ಕಿದೆ ಎಂದು ಹೇಳಿದರು.